ವೆಬ್‌ಸೈಟ್‌ನಲ್ಲಿ ಮಕ್ಕಳ ಅಶ್ಲೀಲ ವೀಡಿಯೊಗಳು: ಟ್ವಿಟರ್,ದಿಲ್ಲಿ ಪೊಲೀಸರಿಗೆ ಡಿಸಿಡಬ್ಲ್ಯೂ ಸಮನ್ಸ್
ಹೊಸದಿಲ್ಲಿ,ಸೆ.20: ಟ್ವಿಟರ್‌ನ ವೆಬ್‌ಸೈಟ್‌ನಲ್ಲಿ ಮಕ್ಕಳ ಅಶ್ಲೀಲ ವೀಡಿಯೊಗಳ ಲಭ್ಯತೆಯ ಕುರಿತು ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲು)ವು ಕಂಪನಿಗೆ ಮತ್ತು ದಿಲ್ಲಿ ಪೊಲೀಸರಿಗೆ ಸಮನ್ಸ್ ಹೊರಡಿಸಿದೆ.
ಸಮನ್ಸ್‌ಗೆ ಉತ್ತರಿಸಲು ಟ್ವಿಟರ್ ಮತ್ತು ದಿಲ್ಲಿ ಪೊಲೀಸರಿಗೆ ಸೆ.26ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ.
‘ಚಂಡಿಗಡ ವಿವಿ ಘಟನೆಯು ಈ ಬಗ್ಗೆ ನನ್ನನ್ನು ಯೋಚನೆಗೆ ತಳ್ಳಿತ್ತು ಮತ್ತು ತನಿಖೆ ನಡೆಸುವಂತೆ ನನ್ನ ತಂಡಕ್ಕೆ ಸೂಚಿಸಿದ್ದೆ. ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲಿನ ಅತ್ಯಾಚಾರದ ವೀಡಿಯೊಗಳನ್ನು ಟ್ವಿಟರ್‌ನಲ್ಲಿ ನಾವು ಪತ್ತೆ ಹಚ್ಚಿದ್ದೇವೆ. ಕೆಲವು ಪ್ಲಾಟ್‌ಫಾರ್ಮ್‌ಗಳು ಈ ವೀಡಿಯೊಗಳನ್ನು 20ರಿಂದ 30 ರೂ.ಗೆ ಮಾರಾಟವನ್ನೂ ಮಾಡುತ್ತಿವೆ. ಇದು ಭಯಾನಕವಾಗಿದೆ ’ ಎಂದು ಡಿಸಿಡಬ್ಲು ಮುಖ್ಯಸ್ಥೆ ಸ್ವಾತಿ ಮಲಿವಾಲ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ವೆಬ್‌ಸೈಟ್‌ನಲ್ಲಿ ಇಂತಹ ವೀಡಿಯೊಗಳು ಅಸ್ತಿತ್ವದಲ್ಲಿರುವುದು ಹೇಗೆ ಮತ್ತು ಇಂತಹ ವಿಷಯಗಳನ್ನು ತಡೆಯಲು ಯಾವ ನೀತಿಗಳನ್ನು ಅದು ಹೊಂದಿದೆ ಎನ್ನುವುದರ ಬಗ್ಗೆ ನಾವು ಟ್ವಿಟರ್‌ನಿಂಂದ ವಿವರಣೆಯನ್ನು ಕೇಳಿದ್ದೇವೆ ’ ಎಂದ ಮಲಿವಾಲ್,ಇಂತಹ ವೀಡಿಯೊಗಳನ್ನು ಚಿತ್ರೀಕರಿಸಿ ಅಪ್‌ಲೋಡ್ ಮಾಡುವವರನ್ನು ಹಾಗೂ ಸಂತ್ರಸ್ತರು ಮತ್ತು ಆರೋಪಿಗಳನ್ನು ಗುರುತಿಸಲು ಎಫ್‌ಐಆರ್ ದಾಖಲಿಸುವಂತೆ ದಿಲ್ಲಿ ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದರು.
ಟ್ವಿಟರ್ ಈ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ