ಕೈತಪ್ಪಿದ ಅವಕಾಶ?: 'ಛೆಲ್ಲೋ ಶೋ' ಭಾರತದ ಆಸ್ಕರ್‌ ಎಂಟ್ರಿ ಎಂದು ತಿಳಿದ ನಂತರ ಟ್ವಿಟರಿಗರ ಪ್ರತಿಕ್ರಿಯೆ

Update: 2022-09-21 10:26 GMT
Photo: Twitter/DiscussingFilm

ಹೊಸದಿಲ್ಲಿ: ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿ ಗುಜರಾತಿ ಸಿನೆಮಾ ಪಾನ್‌ ನಳಿನ್‌ ಅವರ ʻಛೆಲ್ಲೋ ಶೋʼ(Chhello Show) ಇದರ ಆಯ್ಕೆಯು ಸಾಮಾಜಿಕ ಜಾಲತಾಣಗಳಲ್ಲಿ ಸ್ವಾರಸ್ಯಕರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ಸಿನೆಮಾ ಪರದೆ ಅನುಭವದ ಮೇಲೆ ಬಾಲಕನೊಬ್ಬನಿಗಿರುವ ವ್ಯಾಮೋಹದ ಕುರಿತಾದ ಈ ಚಿತ್ರವನ್ನು ಎಸ್‌ ಎಸ್‌ ರಾಜಮೌಳಿ ಅವರ ಆರ್‌ಆರ್‌ಆರ್‌(RRR), ಸಜಿಮೋನ್‌ ಪ್ರಭಾಕರ್‌ ಅವರ 'ಮಲಯನ್‌ಕುಂಜು' ಬದಿಗೆ ಸರಿಸಿ ಆಯ್ಕೆ ಮಾಡಿರುವುದು ಅಚ್ಚರಿ ಹುಟ್ಟಿಸಿದೆ.

ಛೆಲ್ಲೋ ಶೋ (ಕೊನೆಯ ಫಿಲ್ಮ್‌ ಶೋ)  2021 ರಲ್ಲಿ ಟ್ರಿಬೆಕಾ ಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಪ್ರದರ್ಶನ ಕಂಡಿದ್ದರೆ ಭಾರತೀಯ ಚಿತ್ರಮಂದಿರಗಳಲ್ಲಿ ಅಕ್ಟೋಬರ್‌ 14 ರಂದು ಬಿಡುಗಡೆಗೊಳ್ಳಲಿದೆ.

ಆರ್‌ಆರ್‌ಆರ್‌ ಉತ್ತಮ ಆಯ್ಕೆಯಾಗಿರುತ್ತಿತ್ತು ಎಂದು ಕೆಲ ಟ್ವಿಟ್ಟರಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ʻʻಆರ್‌ಆರ್‌ಆರ್‌ ಗೆ ಆಸ್ಕರ್‌ನಲ್ಲಿ ಉತ್ತಮ ಅವಕಾಶವಿತ್ತು. ಭಾರತಕ್ಕೆ ತಪ್ಪಿ ಹೋದ ಅವಕಾಶ,ʼʼ ಎಂದು ರೋಹಿತ್‌ ಖಿಲ್ನಾನಿ ಎಂಬವರು ಪ್ರತಿಕ್ರಿಯಿಸಿದ್ದಾರೆ.

ʻʻಆರ್‌ಆರ್‌ಆರ್‌ ನ ಜಾಗತಿಕ ಜನಪ್ರಿಯತೆಯನ್ನು ಗಮನಿಸಿದಾಗ ನಮಗೆ ಆಸ್ಕರ್‌ ಪ್ರಶಸ್ತಿ ಗಳಿಸುವ ಉತ್ತಮ ಅವಕಾಶವಿತ್ತು. ಭಾರತೀಯ ಸಿನೆಮಾವನ್ನು ವೈಭವೀಕರಿಸುವ ಚಿತ್ರವೊಂದನ್ನು ಜ್ಯೂರಿ ಸದಸ್ಯರು ಪರಿಗಣಿಸಿಲ್ಲ ಎಂಬುದು ಬೇಸರ ಮೂಡಿಸುತ್ತದೆ,ʼʼ ಎಂದು ಹಿಮೇಶ್‌ ಎಂಬವರು ಬರೆದಿದ್ದಾರೆ.

ʻʻಆರ್‌ಆರ್‌ಆರ್‌ ಗೆ ಈಗಲೂ ಅವಕಾಶವಿದೆ, ಆದರೆ ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್‌ ಆರ್ಟ್ಸ್‌ ಮತ್ತು ಸಾಯನ್ಸಸ್‌ ಜ್ಯೂರಿ ತಾನಾಗಿಯೇ ಈ ಚಿತ್ರವನ್ನು ಪರಿಗಣಿಸಬೇಕಿದೆ,ʼʼ ಎಂದು ಜಲಪತಿ ಗುಡೆಲ್ಲಿ ಎಂಬವರು ಟ್ವೀಟ್‌ ಮಾಡಿದ್ದಾರೆ.

ಕೆಲ ಟ್ವಿಟರ್‌ ಬಳಕೆದಾರರು 'ಛೆಲ್ಲೊ ಶೋ' ಆಯ್ಕೆಯನ್ನು 2013 ರಲ್ಲಿ 'ದಿ ಲಂಚ್‌  ಬಾಕ್ಸ್‌' ಅನ್ನು ಕಡೆಗಣಿಸಿ 'ದಿ ಗುಡ್‌ ರೋಡ್‌' ಅನ್ನು ಆಯ್ಕೆ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.

ʻʻಲಂಚ್‌ ಬಾಕ್ಸ್‌ಗೆ ಆಗಿದ್ದನ್ನು ಗಮನಿಸಿದಾಗ ಅಚ್ಚರಿಯಾಗಿಲ್ಲ," ಎಂದು ಟ್ವಿಟರಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News