×
Ad

ಪಿಎಂ ಕೇರ್ಸ್‌ಗೆ ಟ್ರಸ್ಟಿಯಾಗಿ ರತನ್ ಟಾಟಾ, ಸಲಹಾ ಮಂಡಳಿಗೆ ಸುಧಾ ಮೂರ್ತಿ ನೇಮಕ

Update: 2022-09-21 21:30 IST
photo : pti 

 ಹೊಸದಿಲ್ಲಿ,ಸೆ.21: ಹಿರಿಯ ಕೈಗಾರಿಕೋದ್ಯಮಿ,ಟಾಟಾ ಸನ್ಸ್‌ನ ಚೇರಮನ್ ಎಮಿರಿಟಸ್ ರತನ್ ಟಾಟಾ,ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಕೆ.ಟಿ.ಥಾಮಸ್ ಮತ್ತು ಲೋಕಸಭೆಯ ಮಾಜಿ ಡೆಪ್ಯುಟಿ ಸ್ಪೀಕರ್ ಕರಿಯಾ ಮುಂಡಾ ಅವರನ್ನು ಪಿಎಂ ಕೇರ್ಸ್ ಫಂಡ್‌ನ ನೂತನ ಟ್ರಸ್ಟಿಗಳನ್ನಾಗಿ ನೇಮಕ ಮಾಡಲಾಗಿದೆ. ಇನ್ಫೋಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರು ಟ್ರಸ್ಟ್‌ನ ಸಲಹಾ ಮಂಡಳಿಗೆ ನಾಮ ನಿರ್ದೇಶನಗೊಂಡ ಮೂವರು ಗಣ್ಯರಲ್ಲಿ ಸೇರಿದ್ದಾರೆ ಎಂದು ಪ್ರಧಾನಿ ಕಚೇರಿಯು ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

 ಮಾಜಿ ಸಿಎಜಿ ರಾಜೀವ್ ಮೆಹ್ರಿಷಿ,ಟೀಚ್ ಫಾರ್ ಇಂಡಿಯಾದ ಸಹ ಸ್ಥಾಪಕ ಹಾಗೂ ಇಂಡಿಕಾರ್ಪ್ಸ್ ಮತ್ತು ಪಿರಾಮಲ್ ಫೌಂಡೇಷನ್‌ನ ಮಾಜಿ ಸಿಇಒ ಆನಂದ ಶಾ ಅವರು ಸಲಹಾಮಂಡಳಿಗೆ ನಾಮ ನಿರ್ದೇಶನಗೊಂಡ ಇತರ ಇಬ್ಬರು ಗಣ್ಯರಾಗಿದ್ದಾರೆ.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟಿಗಳ ಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಪಾಲ್ಗೊಂಡಿದ್ದರು. ಶಾ ಮತ್ತು ಸೀತಾರಾಮನ್ ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟಿಗಳಾಗಿದ್ದಾರೆ. ಸಭೆಯಲ್ಲಿ ಟಾಟಾ,ನ್ಯಾ.ಥಾಮಸ್ ಮತ್ತು ಮುಂಡಾ ಅವರನ್ನು ಫಂಡ್‌ನ ನೂತನ ನಾಮನಿರ್ದೇಶಿತ ಟ್ರಸ್ಟಿಗಳನ್ನಾಗಿ ನೇಮಕಗೊಳಿಸಲಾಯಿತು. ನೂತನವಾಗಿ ನೇಮಕಗೊಂಡ ಮೂವರು ಟ್ರಸ್ಟಿಗಳೂ ಸಭೆಯಲ್ಲಿ ಉಪಸ್ಥಿತರಿದ್ದರು.

ನೂತನ ಟ್ರಸ್ಟಿಗಳು ಮತ್ತು ಸಲಹೆಗಾರರ ಪಾಲ್ಗೊಳ್ಳುವಿಕೆಯು ಪಿಎಂ ಕೇರ್ಸ್ ಫಂಡ್‌ನ ಕಾರ್ಯನಿರ್ವಹಣೆಯ ಕುರಿತು ವ್ಯಾಪಕ ದೃಷ್ಟಿಕೋನಗಳನ್ನು ಒದಗಿಸಲಿದೆ. ಸಾರ್ವಜನಿಕ ಜೀವನದಲ್ಲಿ ಅವರ ಅಗಾಧ ಅನುಭವವು ಪಿಎಂ ಕೇರ್ಸ್ ಫಂಡ್ ವಿವಿಧ ಸಾರ್ವಜನಿಕ ಅಗತ್ಯಗಳಿಗೆ ಇನ್ನಷ್ಟು ಸ್ಪಂದಿಸುವಂತೆ ಮಾಡುವಲ್ಲಿ ಹೆಚ್ಚಿನ ಹುರುಪನ್ನು ನೀಡಲಿದೆ ಎಂದು ಪ್ರಧಾನಿ ಸಭೆಯಲ್ಲಿ ನುಡಿದರು.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪಿಎಂ ಕೇರ್ಸ್ ಫಂಡ್‌ನ್ನು ಸೃಷ್ಟಿಸಲಾಗಿತ್ತು. ಸಾಂಕ್ರಾಮಿಕದಂತಹ ಯಾವುದೇ ರೀತಿಯ ತುರ್ತು ಅಥವಾ ಸಂಕಷ್ಟ ಸ್ಥಿತಿಯನ್ನು ನಿರ್ವಹಿಸುವುದು ಮತ್ತು ಪೀಡಿತ ವ್ಯಕ್ತಿಗಳಿಗೆ ಪರಿಹಾರವನ್ನು ಒದಗಿಸುವುದು ಫಂಡ್‌ನ ಪ್ರಾಥಮಿಕ ಉದ್ದೇಶವಾಗಿದೆ. ಫಂಡ್ ಸಂಪೂರ್ಣವಾಗಿ ವ್ಯಕ್ತಿಗಳು/ಸಂಸ್ಥೆಗಳಿಂದ ಸ್ವಯಂಪ್ರೇರಿತ ದೇಣಿಗೆಗಳನ್ನು ಒಳಗೊಂಡಿರುತ್ತದೆ ಮತ್ತು ಯಾವುದೇ ಬಜೆಟ್ ಬೆಂಬಲವನ್ನು ಪಡೆಯುವುದಿಲ್ಲ ಎಂದು ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ಪಿಎಂ ಕೇರ್ಸ್ ಫಂಡ್‌ಗೆ ನೀಡುವ ದೇಣಿಗೆಗಳು ಆದಾಯ ತೆರಿಗೆ ಕಾಯ್ದೆಯ ಕಲಂ 80ಜಿ ಅಡಿ ಶೇ.100ರಷ್ಟು ವಿನಾಯಿತಿಗೆ ಅರ್ಹವಾಗಿರುತ್ತವೆ. ಕೇಂದ್ರದ ದತ್ತಾಂಶಗಳಂತೆ 2020-21ರ ನಡುವೆ ಪಿಎಂ ಕೇರ್ಸ್ ಫಂಡ್‌ನಡಿ ಒಟ್ಟು 7,031.99 ಕೋ.ರೂ.ಗಳು ಸಂಗ್ರಹವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News