ಶೇ.10 ಇಡಬ್ಲ್ಯುಎಸ್ ಮೀಸಲಾತಿ ಮೇಲ್ಜಾತಿಗಳ ಜನರಿಗಾಗಿದೆ:ಕೇಂದ್ರ ಸರಕಾರ

Update: 2022-09-21 16:19 GMT

ಹೊಸದಿಲ್ಲಿ,ಸೆ.21: ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯುಎಸ್)ಗಳಿಗೆ ಕೇಂದ್ರ ಸರಕಾರದ ಮತ್ತು ಖಾಸಗಿ ಶಿಕ್ಷಣ ಕ್ಷೇತ್ರಗಳಲ್ಲಿ ಪ್ರವೇಶಕ್ಕೆ ಹಾಗೂ ಕೇಂದ್ರ ಸರಕಾರದ ಹುದ್ದೆಗಳಲ್ಲಿ ನೇಮಕಾತಿಗೆ ಶೇ.10ರಷ್ಟು ಮೀಸಲಾತಿಯನ್ನು ಒದಗಿಸಿರುವ 103ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯನ್ನು ಮಂಗಳವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಬೆಂಬಲಿಸಿದ ಕೇಂದ್ರವು,ಇಡಬ್ಲುಎಸ್ ಮೀಸಲಾತಿಯು ಮುಂದುವರಿದ ಜಾತಿಗಳು ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಜನರ ಗುಂಪಿಗಾಗಿದೆ ಎಂದು ತಿಳಿಸಿದೆ.

ಎಸ್‌ಸಿ/ಎಸ್‌ಟಿ/ಒಬಿಸಿ ಗುಂಪುಗಳು ಹೆಚ್ಚಿನ ಮೀಸಲಾತಿಗಳು ಮತ್ತು ದೃಢಕ್ರಮದ ನೀತಿಗಳ ಪ್ರಾಥಮಿಕ ಫಲಾನುಭವಿಗಳಾಗಿವೆ,ಹೀಗಾಗಿ ತಾರತಮ್ಯಕ್ಕೆ ಯಾವುದೇ ಆಧಾರವಿಲ್ಲ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್,ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್.ಆರ್.ಭಟ್,ಬೇಲಾ ತ್ರಿವೇದಿ ಮತ್ತು ಜೆ.ಬಿ.ಪರ್ಡಿವಾಲಾ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠದೆದುರು ವಾದಿಸಿದರು.

ಈ ಮೀಸಲಾತಿಯು ಹೊಸ ವಿಕಸನವಾಗಿದೆ ಮತ್ತು ಎಸ್‌ಟಿಗಳು,ಎಸ್‌ಸಿಗಳು ಮತ್ತು ಒಬಿಸಿಗಳಿಗೆ ಮೀಸಲಾತಿಗಳಿಂದ ಸಂಪೂರ್ಣವಾಗಿ ಸ್ವತಂತ್ರವಾಗಿದೆ. ಅದು ಅವರ ಹಕ್ಕುಗಳನ್ನು ಕಿತ್ತುಕೊಳ್ಳುವುದಿಲ್ಲ ಎಂದೂ ಅವರು ಹೇಳಿದರು.

 ತಿದ್ದುಪಡಿಯನ್ನು ಪ್ರಶ್ನಿಸಿದವರ ಅಧಿಕಾರ ಸ್ಥಾನವನ್ನು ಪ್ರಶ್ನಿಸಿದ ಅವರು,ತಿದ್ದುಪಡಿಯು ತಮ್ಮ ಮೇಲೆ ನೇರ ಪರಿಣಾಮವನ್ನು ಬೀರಿದೆ ಎಂದು ಈ ಗುಂಪುಗಳು (ಎಸ್‌ಸಿ/ಎಸ್‌ಟಿ/ಒಬಿಸಿ) ಸಾಬೀತುಪಡಿಸಿದ ಹೊರತು ತಾರತಮ್ಯಕ್ಕೆ ಯಾವುದೇ ಕಾರಣಗಳಿಲ್ಲ ಎಂದು ಹೇಳಿದರು.

ಸಾಮಾನ್ಯ ವರ್ಗದಲ್ಲಿಯೂ ಕಡುಬಡವರ ಗುಂಪಿದೆ ಮತ್ತು ಅದು ಈ ಇಡಬ್ಲುಎಸ್ ಆಗಿದೆ. ಹೀಗಿರುವಾಗ ಮೀಸಲಾತಿಗೆ ಶೇ.50ರ ಮಿತಿಯನ್ನು ಏಕೆ ನಿಗದಿ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News