ಅಧಿಕ ರಕ್ತದೊತ್ತಡ ನಿಯಂತ್ರಣ ಉಪಕ್ರಮಕ್ಕಾಗಿ ಭಾರತಕ್ಕೆ ವಿಶ್ವಸಂಸ್ಥೆ ಪ್ರಶಸ್ತಿ: ಸಚಿವ ಮಾಂಡವೀಯ
ಹೊಸದಿಲ್ಲಿ,ಸೆ.21: ಭಾರತವು ತನ್ನ ಅಧಿಕ ರಕ್ತದೊತ್ತಡ ನಿಯಂತ್ರಣ ಉಪಕ್ರಮ (ಐಎಚ್‌ಸಿಐ)ಕ್ಕಾಗಿ ವಿಶ್ವಸಂಸ್ಥೆಯ ಪ್ರಶಸ್ತಿಯನ್ನು ಗೆದ್ದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ಅವರು ಬುಧವಾರ ತಿಳಿಸಿದ್ದಾರೆ. ಕೇಂದ್ರ ಸರಕಾರವು 2017ರಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಈ ಬೃಹತ್ ಉಪಕ್ರಮಕ್ಕೆ ಚಾಲನೆ ನೀಡಿತ್ತು. ‘ಎಲ್ಲರಿಗೂ ಆರೋಗ್ಯ ಮತ್ತು ಕ್ಷೇಮವನ್ನು ಖಚಿತಪಡಿಸುವ ಪ್ರಧಾನಿ ನರೇಂದ್ರ ಮೋದಿಯವರ ಧ್ಯೇಯವನ್ನು ಐಎಚ್‌ಸಿಐ ಬಲಗೊಳಿಸಿದೆ. ನಾವು ಆರೋಗ್ಯವಂತ ಮತ್ತು ಸದೃಢ ಭಾರತವನ್ನು ನಿರ್ಮಿಸಲು ಬದ್ಧರಾಗಿದ್ದೇವೆ ’ ಎಂದು ಮಾಂಡವೀಯ ಟ್ವೀಟಿಸಿದ್ದಾರೆ.
ಕೇಂದ್ರ ಸರಕಾರ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಸಹಭಾಗಿತ್ವದ ಉಪಕ್ರಮವಾಗಿರುವ ಐಎಚ್‌ಸಿಐ ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘2022ರ ವಿಶ್ವಸಂಸ್ಥೆ ಅಂತರ್‌ಏಜೆನ್ಸಿ ಕಾರ್ಯ ಪಡೆ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆ ಕುರಿತು ಡಬ್ಲುಎಚ್‌ಒ ವಿಶೇಷ ಕಾರ್ಯಕ್ರಮ ಪ್ರಶಸ್ತಿ’ಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಈ ಪ್ರಶಸ್ತಿಯು ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಯುವಲ್ಲಿ ಮತ್ತು ಏಕೀಕೃತ ಜನಕೇಂದ್ರಿತ ಪ್ರಾಥಮಿಕ ಆರೈಕೆಯನ್ನು ಒದಗಿಸುವಲ್ಲಿ ಭಾರತದ ಬದ್ಧತೆ ಮತ್ತು ಕ್ರಮವನ್ನು ಗುರುತಿಸಿದೆ.
2017ರಲ್ಲಿ ಆರಂಭಗೊಂಡ ಉಪಕ್ರಮವನ್ನು ಹಂತ ಹಂತವಾಗಿ 23 ಜಿಲ್ಲೆಗಳ 130ಕ್ಕೂ ಅಧಿಕ ಜಿಲ್ಲೆಗಳಿಗೆ ವಿಸ್ತರಿಸಲಾಗಿತ್ತು. ಈ ಉಪಕ್ರಮದಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ 34 ಲಕ್ಷಕ್ಕೂ ಅಧಿಕ ಜನರು ಆಯುಷ್ಮಾನ್ ಭಾರತ ಆರೋಗ್ಯ ಸ್ವಾಸ್ಥ ಕೇಂದ್ರಗಳು ಸೇರಿದಂತೆ ಸರಕಾರದ ಆರೊಗ್ಯ ಸೌಲಭ್ಯಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಎಚ್‌ಸಿಐ ಚಿಕಿತ್ಸೆ ಪಡೆದ ರೋಗಿಗಳ ಪೈಕಿ ಅರ್ಧದಷ್ಟು ಜನರ ರಕ್ತದೊತ್ತಡ ನಿಯಂತ್ರಣದಲ್ಲಿದೆ ಎಂದು ತಿಳಿಸಿರುವ ಸಚಿವಾಲಯವು, ಭಾರತದಲ್ಲಿ ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ರಕ್ಷಣೆ ವ್ಯವಸ್ಥೆಯೊಳಗೆ ತನ್ನ ಅಸಾಧಾರಣ ಕಾರ್ಯದಿಂದಾಗಿ ಐಎಚ್‌ಸಿಐ ಗುರುತಿಸಲ್ಪಟ್ಟಿದೆ ಎಂದು ಹೇಳಿದೆ.