ಚೀನಾದ ಮಾಜಿ ಸಚಿವರಿಗೆ ಮರಣದಂಡನೆ ಶಿಕ್ಷೆ

Update: 2022-09-22 16:54 GMT

ಬೀಜಿಂಗ್, ಸೆ.22: ವೈಯಕ್ತಿಕ ಲಾಭಕ್ಕಾಗಿ ಕಾನೂನನ್ನು ತಿರುಚಿದ ಅಪರಾಧಕ್ಕಾಗಿ ಚೀನಾದ ಮಾಜಿ ನ್ಯಾಯ ಸಚಿವರಿಗೆ ಗುರುವಾರ  2 ವರ್ಷದ ಕಾಲಾವಕಾಶದೊಂದಿಗೆ  ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.

ಚೀನಾದ ಕಾನೂನಿನ ಪ್ರಕಾರ, ಕಾಲಾವಕಾಶದೊಂದಿಗೆ ಮರಣದಂಡನೆ ಶಿಕ್ಷೆ ಎಂದರೆ, 2  ವರ್ಷದ ಬಳಿಕ ಅಪರಾಧಿಯ ನಡತೆಯನ್ನು ಪರಿಗಣಿಸಿ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬಹುದು.

67  ವರ್ಷದ ಫು ಜೆಂಗ್‍ಹುವ ನ್ಯಾಯ ಇಲಾಖೆಯ ಸಚಿವರಾಗಿದ್ದ ಸಂದರ್ಭ ಹಲವು ಉನ್ನತ ಮಟ್ಟದ ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ನೇತೃತ್ವ ವಹಿಸಿದ್ದರು. ಆಗ ಕಾನೂನನ್ನು ವೈಯಕ್ತಿಕ ಲಾಭಕ್ಕಾಗಿ ತಿರುಚಿದ ಮತ್ತು ಲಂಚ ಪಡೆದ ಆರೋಪ ಅವರ ಮೇಲಿತ್ತು. ಸಾರ್ವಜನಿಕ ಭದ್ರತೆ ಇಲಾಖೆಯ ಸಹಾಯಕ ಸಚಿವರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ಚೀನಾದ ಉನ್ನತ ಭದ್ರತಾ ಅಧಿಕಾರಿ ಹಾಗೂ ಕಮ್ಯುನಿಸ್ಟ್ ಪಕ್ಷದ ಪಾಲಿಟ್‍ಬ್ಯೂರೊ ಸ್ಥಾಯಿ ಸಮಿತಿಯ ನಿವೃತ್ತ ಸದಸ್ಯನಾಗಿದ್ದ ಝೊವು ಯಾಂಕಾಂಗ್ ಅವರ ವಿರುದ್ಧದ ಭ್ರಷ್ಟಾಚಾರ ತನಿಖೆಯ ನೇತೃತ್ವವನ್ನು ಜೆಂಗ್‍ಹುವ ವಹಿಸಿದ್ದರು. 2018ರಲ್ಲಿ ನ್ಯಾಯ ಇಲಾಖೆಯ ಸಚಿವರಾಗಿ ನೇಮಕಗೊಂಡಿದ್ದ ಅವರು, ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವೀ ಮುಖಂಡನಾಗಿ ಹೊರಹೊಮ್ಮುವ ಲಕ್ಷಣ ತೋರಿದ್ದರು. ಆದರೆ ಅದೇ ಸಂದರ್ಭ ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿ ಇದೀಗ ಮರಣದಂಡನೆ ಶಿಕ್ಷೆ ಎದುರಿಸುವಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News