ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಶಿವಾಜಿ ಪಾರ್ಕಿನಲ್ಲಿ ದಸರಾ ರ್ಯಾಲಿಗೆ ಅನುಮತಿಸಿದ ಹೈಕೋರ್ಟ್

Update: 2022-09-23 12:35 GMT
ಉದ್ಧವ್ ಠಾಕ್ರೆ (PTI)

ಮುಂಬೈ: ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕಿನಲ್ಲಿ ದಸರಾ ರ್ಯಾಲಿಯನ್ನು ನಡೆಸಲು ಉದ್ಧವ್ ಠಾಕ್ರೆ(Uddhav Thckeray) ನೇತೃತ್ವದ ಶಿವಸೇನೆಗೆ(Shiv Sena) ಅನುಮತಿ ನೀಡುವ ಮೂಲಕ ಬಾಂಬೆ ಹೈಕೋರ್ಟ್(Bombay High Court) ಇಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ನೇತೃತ್ವದ ಶಿವಸೇನೆಗೆ ದೊಡ್ಡ ಆಘಾತ ನೀಡಿದೆ. ಶಿವಸೇನೆಯ ಮೇಲೆ ಯಾರಿಗೆ ಹಿಡಿತವಿದೆ ಎಂಬ ಕುರಿತ ಅರ್ಜಿಯ ವಿಚಾರಣೆ ಮುಗಿದು ತೀರ್ಪು ಹೊರಬೀಳುವ ತನಕ ದಸರಾ ರ್ಯಾಲಿ ನಡೆಸುವ ಅರ್ಜಿಯನ್ನು ಪರಿಗಣಿಸಬಾರದೆಂಬ ಶಿಂಧೆ ಬಣದ ಅಪೀಲನ್ನು ನ್ಯಾಯಾಲಯ ತಿರಸ್ಕರಿಸಿದೆ.

ಬೃಹನ್‍ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಈ ಹಿಂದೆ ಉದ್ಧವ್ ನೇತೃತ್ವದ ಶಿವಸೇನೆಗೆ ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ದಸರಾ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿತ್ತು.

ಇದನ್ನು ಪ್ರಶ್ನಿಸಿ ಠಾಕ್ರೆ ಬಣ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರೆ ಈ ಪ್ರಕರಣದಲ್ಲಿ ಮಧ್ಯಪ್ರವೇಶಕ್ಕೆ ಶಿಂಧೆ ಬಣ ಅನುಮತಿ ಕೋರಿತ್ತು.

ಬಿಎಂಸಿ ಆದೇಶವು ಕಾನೂನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ತಮ್ಮ ಅರ್ಜಿಯ ಮೂಲಕ ಠಾಕ್ರೆ ಬಣ ಪಕ್ಷದ ಮೇಲೆ ತಮಗೆ ಹಿಡಿತವಿದೆ ಎಂದು ಹೇಳಲು ಹೊರಟಿದೆ ಎಂದು ಶಿಂಧೆ ಬಣ ಪರ ವಾದ ಮಂಡಿಸಿದ ದಾದರ್ ಶಾಸಕ ಸದಾ ಸರ್ವಂಕರ್ ಹೇಳಿದ್ದರು.

ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ ಠಾಕ್ರೆ ನೇತೃತ್ವದ ಶಿವಸೇನೆ ಈ ತೀರ್ಪು ನ್ಯಾಯಾಂಗದ ಮೇಲಿನ ತನ್ನ ವಿಶ್ವಾಸವನ್ನು ಇನ್ನಷ್ಟು ಬಲಪಡಿಸಿದೆ. ಈ ಬಾರಿಯ ರ್ಯಾಲಿ ವೈಭವೋಪೇತವಾಗಲಿದೆ ಎಂದು ಠಾಕ್ರೆ ಬಣದ ವಕ್ತಾರ ಮನೀಶಾ ಕಾಯಂಡೆ ತಿಳಿಸಿದ್ದಾರೆ.

ಇದನ್ನೂ ಓದಿ: ಅತ್ಯಂತ ವಿರಳ ಗುಂಪಿನ ರಕ್ತದಾನ ಮಾಡಿ ಬಾಲಕಿಯ ಪ್ರಾಣ ಉಳಿಸಲು ಭೋಪಾಲದಿಂದ ನಾಗ್ಪುರಕ್ಕೆ ಪ್ರಯಾಣಿಸಿದ ವಿಮಾ ಉದ್ಯೋಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News