ಮಂಗಳೂರು: ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ ಶಿಕ್ಷೆ

Update: 2022-09-23 14:27 GMT

ಮಂಗಳೂರು, ಸೆ.23: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೊ) ಎಫ್‌ಟಿಎಸ್‌ಸಿ-1 ನ್ಯಾಯಾಲಯವು 3 ವರ್ಷಗಳ ಸಜೆ ವಿಧಿಸಿ ತೀರ್ಪು ನೀಡಿದೆ.

ಕೊಕ್ಕಡದ ಪದ್ಮನಾಭ ಶಿಕ್ಷೆಗೊಳಗಾದ ಆರೋಪಿ.

2019ರ ಆ.17ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯು ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಆರೋಪಿ ಪದ್ಮನಾಭನು ಬಾಲಕಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಮಾನಕ್ಕೆ ಕುಂದುಂಟಾಗುವಂತೆ ಆಕೆಯ ಕೈ ಹಿಡಿದು ಎಳೆದಿದ್ದ ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಸೈ ಚಂದ್ರಶೇಖರ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೊ) ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ  ಆರೋಪಿಗೆ ಪೊಕ್ಸೊ ಕಾಯ್ದೆಯ ಕಲಂ 12ರಡಿ 3 ವರ್ಷ ಸಾದಾ ಸಜೆ ಮತ್ತು  500 ರೂ. ದಂಡ, ಐಪಿಸಿ ಸೆಕ್ಷನ್ 354(ಡಿ)ಪ್ರಕಾರ 3 ವರ್ಷ ಸಾದಾ ಸಜೆ ಮತ್ತು  500 ರೂ ದಂಡ ಹಾಗೂ ಐಪಿಸಿ 341ರಂತೆ 1 ವರ್ಷ ಸಜೆ ವಿಧಿಸಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ ಪರಿಹಾರ ನೀಡುವಂತೆಯೂ ಆದೇಶಿದ್ದಾರೆ.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News