ಪೌರಕಾರ್ಮಿಕರಿಗೆ 1 ಕೋಟಿ ರೂ. ವೆಚ್ಚದಲ್ಲಿ ವಸತಿ ನಿರ್ಮಾಣ: ಜೀವಂಧರ್ ಜೈನ್

Update: 2022-09-23 14:57 GMT

ಪುತ್ತೂರು:  ಪೌರ ಕಾರ್ಮಿಕರಿಗೆ ವಸತಿ ಯೋಜನೆಯಡಿ ತಾಲೂಕಿನ ಬಲ್ನಾಡು ಗ್ರಾಮದ ಕಂಜೂರು ಎಂಬಲ್ಲಿ ಒಂದು ಎಕ್ರೆ ಜಾಗ ಗುರುತಿಸಲಾಗಿದ್ದು, ಒಂದು ಕೋಟಿ ವೆಚ್ಚದಲ್ಲಿ ವಸತಿ ನಿರ್ಮಾಣಕ್ಕಾಗಿ ಸಿದ್ಧಪಟ್ಟಿ ತಯಾರಾಗಿದೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದರು.

ಅವರು ಶುಕ್ರವಾರ ನಗರದ ಪುರಭವನದಲ್ಲಿ  ನಗರಸಭೆ ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೌರ ಕಾರ್ಮಿಕರ ದಿನಾಚರಣೆಗೆ ಮುಂದಿನ ಬಜೆಟ್‍ನಲ್ಲಿ ಐದು ಲಕ್ಷ ರೂಪಾಯಿಯನ್ನು ಇಡಲಾಗಿದೆ ಎಂದು ತಿಳಿಸಿದ ಅವರು, ಜನರ ಆರೋಗ್ಯ ಕಾಪಾಡುವ ಸ್ವಚ್ಛತೆ ಜತೆಗೆ ಕಚೇರಿಗಳಲ್ಲಿ ಸಾರ್ವಜನಿಕವಾಗಿ ಒಳ್ಳೆಯ ಸ್ಪಂದನೆ, ಶೀಘ್ರ ಕೆಲಸ ಕಾರ್ಯಗಳು ಮಾಡುವ ಅಪೇಕ್ಷೆ ಸಾರ್ವಜನಿಕರಲ್ಲಿದ್ದು, ಈ ರೀತಿಯ ಬೇಡಿಕೆಗಳು ಈಡೇರಿದಾಗ ಪುತ್ತೂರು ನಗರಸಭೆ ಒಂದನೇ ಸ್ಥಾನ ಪಡೆಯುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ ಮಾತನಾಡಿ, ನಗರದ ಸ್ವಾಸ್ಥ್ಯ, ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಕೊಡುಗೆ ಅಪಾರ. ನಗರ ಸಂರಕ್ಷಣೆ, ಪರಿಸರ ರಕ್ಷಣೆ ಜತೆಗೆ ಸೌಂದರ್ಯವಾಗಿರುವಲ್ಲಿ ಅವರ ಶ್ರಮಿವಿದೆ ಎಂದರು.

ನಿವೃತ್ತ ಪೌರ ಕಾರ್ಮಿಕ ರಾಜು ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ., ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಹಿರಿಯ ಪೌರಕಾರ್ಮಿಕ ದಯಾನಂದ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪೌರ ಕಾರ್ಮಿಕರು, ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಸುಮಾರು 75 ಮಂದಿಯನ್ನು ಸನ್ಮಾನಿಸಲಾಯಿತು. ಪೌರ ಕಾರ್ಮಿಕರಿಗಾಗಿ ನಡೆದ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ನಗರಸಭೆ ಸಿಬ್ಬಂದಿಗಳು, ಪೌರ ಕಾರ್ಮಿಕರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.  ನಗರಸಭೆ ಸಿಬ್ಬಂದಿ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ರಾಮಚಂದ್ರ ಸಹಕರಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News