ಸರಕಾರಿ ಸವಲತ್ತುಗಳೂ.. ಅಸಂಘಟಿತ ದಲಿತರ ಅಭಿವೃದ್ಧಿಯೂ...

Update: 2022-09-24 04:49 GMT

ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಹಿಂದೆ ಅಕ್ಷರಲೋಕದಿಂದ ವಂಚಿತರಾಗಿದ್ದರೂ, ದೈಹಿಕ ಶ್ರಮಶಕ್ತಿಯ ಬಗ್ಗೆ ಅಪಾರ ನಂಬಿಕೆ ಮತ್ತು ಗೌರವವನ್ನು ಇರಿಸಿಕೊಂಡ ದಲಿತ ಸಮುದಾಯ ತಮ್ಮ ಸ್ವಾಭಿಮಾನವನ್ನು ಜೋಪಾನ ಮಾಡಿಕೊಂಡೇ ಸಣ್ಣ ಪುಟ್ಟ ವೃತ್ತಿಗಳನ್ನು ಕಲಿತು ಅವುಗಳನ್ನು ತಮ್ಮ ಜೀವನೋಪಾಯದ ಆಧಾರಸ್ತಂಭಗಳನ್ನಾಗಿ ಮಾಡಿಕೊಂಡು ಮುನ್ನಡೆದದ್ದು, ಅವು ಇಂದಿಗೂ ಮುಂದುವರಿದಿರುವುದನ್ನು ನಾವು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಿರಲಿ, ನಗರ ಪ್ರದೇಶಗಳಿರಲಿ ಇಂತಹ ವೃತ್ತಿಗಳು ಆ ಸಮುದಾಯವನ್ನು ಆರ್ಥಿಕೋನ್ನತಿಗೆ ನಿರೀಕ್ಷಿತ ಮಟ್ಟದಲ್ಲಿ ತಂದಿರಿಸದಿದ್ದರೂ ಆ ಸಂದರ್ಭದ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದೆ ಎಂಬುದು ಸುಳ್ಳೇನಲ್ಲ. ದೈಹಿಕ ಶ್ರಮವನ್ನು ಬಳಸಿಕೊಂಡೇ ಕಟ್ಟಿಗೆಗಳನ್ನು ಒಡೆದು (ಸೌದೆ ಒಡೆದು) ಒಲೆಯ ಉರುವಲಿಗಾಗಿ ಮಾರಾಟ ಮಾಡುತ್ತಾ ಬಂದ ಅನೇಕ ಕುಟುಂಬಗಳು, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಪೂರಕ ಕೆಲಸಗಳಾದ ಕಲ್ಲುಬಂಡೆ, ಜಲ್ಲಿ ಒಡೆಯುವ, ಗಾರೆ ಕೆಲಸ, ಕಾರ್ಪೆಂಟರಿ, ಬಣ್ಣ ಬಳಿಯುವ, ವಿದ್ಯುತ್ ಕೆಲಸ, ಕೊಳಾಯಿ ರಿಪೇರಿ, ಜಲ ಸಂಪರ್ಕ, ಹಮಾಲಿ ಕೆಲಸ, ಹೊಲಿಗೆವೃತ್ತಿ, ಅಡುಗೆ ಕೆಲಸ, ಮನೆಗೆಲಸ ಮುಂತಾದ ದೈಹಿಕ ಶ್ರಮದ ಕೆಲಸಗಳ ಜೊತೆ ಜೊತೆಗೆ ಮತ್ತೂ ಕೆಲವರು ಸಂಗೀತ ಪರಿಕರಗಳಾದ ಹಾರ್ಮೋನಿಯಂ, ತಬಲ ಮುಂತಾದವುಗಳನ್ನು ನುಡಿಸುವುದಲ್ಲದೆ ಇನ್ನಿತರ ಕೆಲವು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದರಿಂದಲೂ ತಮ್ಮ ತುತ್ತಿನ ಚೀಲವನ್ನು ತುಂಬಿಸಿಕೊಂಡಿರುವುದು ಮಾತ್ರವಲ್ಲ, ಕೆಲವರು ತಮ್ಮ ಬುದ್ಧಿವಂತಿಕೆಯಿಂದ ಬಂದ ಅಲ್ಪಆದಾಯದಲ್ಲೇ ಸ್ವಲ್ಪಭಾಗವನ್ನು ಉಳಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೋ, ಭವಿಷ್ಯತ್ತಿನ ಬದುಕಿಗೋ ಕಾಪಾಡಿಕೊಂಡದ್ದು ಉಂಟು. ಮತ್ತೆ ಕೆಲವೊಂದು ಸಂದರ್ಭಗಳಲ್ಲಿ ಶ್ರಮದ ದುಡಿಮೆಯಿಂದ ಬಳಲಿದ ತಮ್ಮ ದೇಹಾಲಸ್ಯವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಮದ್ಯದ ಚಟಕ್ಕೆ ಬಲಿಯಾಗಿ ಅದು ಹಾಗೇ ಮುಂದುವರಿದು ಕುಡಿತಕ್ಕೆ ದಾಸರಾಗಿ ಕೊನೆಗೊಮ್ಮೆ ಅನಾರೋಗ್ಯ ಆವರಿಸಿ ಇಹಲೋಕ ತ್ಯಜಿಸುವ ಮಟ್ಟಕ್ಕೆ ಬಂದದ್ದೂ ಈ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕೋನ್ನತಿಗೆ ಅಡ್ಡಿಯಾದದ್ದನ್ನು ನಾವು ಮನಗಾಣಬೇಕಿದೆ. ದೇಹದಲ್ಲಿ ಶಕ್ತಿ ಇರುವವರೆಗೂ ದುಡಿದೇ ಬದುಕುತ್ತೇನೆ ಎಂಬ ಛಲದಿಂದ ಬದುಕನ್ನು ಕಟ್ಟಿಕೊಂಡ ಇಂತಹ ಶ್ರಮಜೀವಿಗಳ ಬದುಕನ್ನು ಸುಧಾರಿಸಲು ಯಾವುದೇ ಯೋಜನೆಗಳನ್ನು ರೂಪಿಸಲು ಆಡಳಿತ ಶಾಹಿಗಳು ಗಮನಹರಿಸದಿದ್ದರೂ ಅದರ ಬಗ್ಗೆ ಚಿಂತಿಸದೆ ತಮ್ಮ ಪಾಡಿಗೆ ತಾವು ಅಸಹಾಯಕತೆಯಿಂದಲೋ, ಅನಿವಾರ್ಯತೆಯಿಂದಲೋ ಬದುಕಿದ ಈ ನೆಲದ ದಲಿತ ಕುಟುಂಬಗಳಿಗೆ ಸರಕಾರದ ಮೀಸಲಾತಿ ಮತ್ತು ಅದರಡಿ ದೊರಕಬಹುದಾದ ಯಾವುದಾದರೂ ಸೌಲಭ್ಯಗಳು ಸಿಕ್ಕಿವೆಯೇ ಎಂಬ ಬಗ್ಗೆ ಆರ್ಥಿಕ ತಜ್ಞರು, ಸಾಮಾಜಿಕ ಚಿಂತಕರು ಅವಲೋಕಿಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೆಲೆ ಕಂಡುಕೊಂಡಿರುವ ಭೂ ರಹಿತ ಕೃಷಿ ಕೂಲಿಕಾರ ಕುಟುಂಬಗಳ ಕತೆಯೂ ಭಿನ್ನವಾಗಿಲ್ಲ. ಮೇಲ್ವರ್ಗದ ಭೂ ಮಾಲಕರ ಹೊಲ, ಗದ್ದೆ, ತೋಟಗಳಲ್ಲಿ ಹಗಲಿರುಳೆನ್ನದೆ ಶ್ರಮವಹಿಸಿ ಬೆವರು ಹರಿಸಿ ದುಡಿಯುವ ಕೈಗಳಿಗೆ ಅರೆ ಕಾಸಿನ ಮಜ್ಜಿಗೆಯಂತೆ ಬೆಳೆದ ಬೆಳೆಯಲ್ಲಿ ಒಂದಷ್ಟು ಕಾಳು, ಕಡ್ಡಿಗಳನ್ನು ನೀಡಿ ತಮ್ಮ ಗೋದಾಮುಗಳನ್ನು ತುಂಬಿಸಿಕೊಳ್ಳುವ, ಮಾರುಕಟ್ಟೆಗಳಿಗೆ ಸಾಗಿಸಿ ಅಪಾರ ಆರ್ಥಿಕ ಲಾಭ ಮಾಡಿಕೊಳ್ಳುವವರ ನಡುವೆ ಭೂ ರಹಿತ ದಲಿತ ಕುಟುಂಬಗಳದ್ದು ಮೂಕವೇದನೆಯೇ ಸರಿ. ಕರ್ತವ್ಯ ನಿಷ್ಠೆಯನ್ನೇ ತಮ್ಮ ಉಸಿರಾಗಿರಿಸಿಕೊಂಡ ಈ ಸಮುದಾಯದ ಶ್ರಮಿಕರು ತಮ್ಮ ಕುಟುಂಬಕ್ಕೆ ಭೂಮಿ ಇಲ್ಲದಿದ್ದರೂ, ತಮ್ಮ ಒಡೆಯನ ಜೋಳಿಗೆ ತುಂಬಿಸುವ ಕಾಯಕದಲ್ಲಿ ತಮ್ಮ ಬದುಕನ್ನೇ ಸವೆಸಿದ, ಸವೆಸುತ್ತಿರುವ ಸಂದರ್ಭಗಳನ್ನು ಮೆಲುಕು ಹಾಕಬೇಕಾಗಿದೆ. ಇಂತಹ ಭೂ ರಹಿತ ಕೃಷಿ ಕೂಲಿಕಾರ ದಲಿತ ಕುಟುಂಬಗಳಿಗೆ ಸರಕಾರವು ವ್ಯವಸಾಯ ಯೋಗ್ಯ ಭೂಮಿಯನ್ನು ಹಂಚಿಕೆ ಮಾಡುವಂತೆ, ನೀರಾವರಿ ಸೌಲಭ್ಯವನ್ನು ದೊರಕಿಸಿಕೊಡುವಂತೆ ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳು ಒತ್ತಾಯಿಸುತ್ತಲೇ ಬಂದಿವೆ. ಆದರೆ, ಅದು ಪರಿಣಾಮಕಾರಿಯಾಗಿ ಜಾರಿಗೊಂಡಾಗ ಮಾತ್ರ ಶ್ರಮಜೀವಿ ದಲಿತರ ಬದುಕು ಸುಧಾರಣೆಯಾದೀತು. ಸರಕಾರಗಳು ವರ್ಷ ವರ್ಷವೂ ರೂಪಿಸುವ ಆಯವ್ಯಯ (ಬಜೆಟ್) ಮತ್ತು ಒದಗಿಸಲು ಬಯಸುವ ಆರ್ಥಿಕ ಸೌಲಭ್ಯಗಳಿಗೆ ಒಂದಷ್ಟು ಬೆಲೆ ಸಿಕ್ಕೀತು. ದುರಂತವೆಂದರೆ ಸರಕಾರದ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಮಧ್ಯವರ್ತಿಗಳ ಕೈ ಮೇಲಾಗುತ್ತಿರುವುದು ಮಾತ್ರವಲ್ಲ, ಮೂಗಿಗೆ ತುಪ್ಪ ಸವರಿಬಿಡುವ ಚಾಣಾಕ್ಷ ಅಧಿಕಾರಿಗಳ ಕೈ ಚಳಕಗಳೂ ಸೇರಿ ಒಟ್ಟಾರೆ ದಲಿತರ ಆರ್ಥಿಕ ಸಬಲೀಕರಣಕ್ಕೆ ಅಡ್ಡಿಯಾಗಿರುವುದು ಈಗ ಜಗಜ್ಜಾಹೀರಾಗಿದೆ. ಆದರೆ, ಅಧಿಕಾರಸ್ಥರ ಬಾಯಿ ಮಾತಿನ ಹುಸಿ ಘೋಷಣೆಗಳು, ಸುದ್ದಿ ಮಾಧ್ಯಮಗಳ ಆರ್ಭಟದ ಕೂಗುಮಾರಿತನಗಳು ದಲಿತರಿಗೆ ಸಂಕಟ ಉಂಟು ಮಾಡುತ್ತಿದ್ದರೆ, ದಲಿತೇತರರಲ್ಲಿ ಅಸೂಯೆ ಅಸಹನೆಗೆ ಮುನ್ನುಡಿ ಬರೆಯುತ್ತಿವೆ. ಆಧುನಿಕ ಯಂತ್ರೋಪಕರಣಗಳನ್ನಷ್ಟೇ ಅವಲಂಬಿಸದೆ ತಮ್ಮ ಬೌದ್ಧಿಕ ಹಾಗೂ ದೈಹಿಕ ಶ್ರಮದಿಂದ ದುಡಿಮೆ ಯನ್ನು ಆಶ್ರಯಿಸಿರುವ ಚರ್ಮಕಾರರು, ಜಾಡಮಾಲಿಗಳು, ಕರಕುಶಲ ಕಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾಕಾರರ ಬದುಕು ಇಂದಿನ ಜಾಗತೀಕರಣದ ಹೊಡೆತಕ್ಕೆ ಸಿಲುಕಿ ತರಗೆಲೆಯಾಗುತ್ತಿರುವುದು ನಮ್ಮ ಕಣ್ಣ ಮುಂದಿನ ಸತ್ಯವಾಗಿದೆ. ಜೀವ ಜಗತ್ತಿನ ಎಲ್ಲ ಅಸಹ್ಯಗಳನ್ನು ತಮ್ಮದೇ ಎಂಬಂತೆ ಭಾವಿಸಿ ಯಾವುದೇ ಮುಜುಗರಪಡದೆ ತಮ್ಮ ಮಾನಸಿಕ ಹಾಗೂ ದೈಹಿಕ ಶ್ರಮವನ್ನೇ ಬಂಡವಾಳವಾಗಿಸಿಕೊಂಡು ನಗರಗಳ ಪರಿಸರವನ್ನು ಸ್ವಚ್ಛಗೊಳಿಸಿ ಸೌಂದರ್ಯವನ್ನು ಹೆಚ್ಚಿಸಲು ಹಗಲಿರುಳೂ ಶ್ರಮಿಸುವ ನಗರಶಿಲ್ಪಿಗಳಾದ ಪೌರಕಾರ್ಮಿಕರಿಗೆ ಅಥವಾ ಜಾಡಮಾಲಿಗಳಿಗೆ ನಗರಸಭೆ, ಪುರಸಭೆ ಮತ್ತು ಮಹಾನಗರಪಾಲಿಕೆಗಳು ಪೌರ ಕಾರ್ಮಿಕರ ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸ ಮತ್ತು ವೈದ್ಯಕೀಯ ಸೌಲಭ್ಯಗಳ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸದಿದ್ದರೆ ಆ ಕುಟುಂಬಗಳು ಬೀದಿಗೆ ಬೀಳುವುದು ನಿಶ್ಚಿತ.

 ತಮ್ಮ ಕೈ ಚಳಕದಿಂದ ದಿನ ಬಳಕೆಯ ವಸ್ತುಗಳು ಅಥವಾ ಜನತೆಯ ಪಾದರಕ್ಷೆಗಳನ್ನು ತಯಾರಿಸಿ ಗ್ರಾಹಕರ ಮೆಚ್ಚುಗೆ ಅಥವಾ ಬೇಡಿಕೆಯನ್ನು ಗಿಟ್ಟಿಸಿಕೊಳ್ಳುವ ಕೌಶಲ್ಯವನ್ನು ಹೊಂದಿರುವ ಚರ್ಮಕಾರರು ಇಂದು ಆರ್ಥಿಕ ಭದ್ರತೆಯಿಲ್ಲದೆ ನಲುಗುವಂತಾಗಿದೆ. ರಸ್ತೆ ಬದಿಗಳಲ್ಲಿ ಪಾದರಕ್ಷೆಗಳನ್ನು ಹೊಲಿದು ಅಥವಾ ಹರಿದ ಪಾದರಕ್ಷೆಗಳಿಗೆ ಹೊಲಿಗೆ ಹಾಕಿ, ಪಾಲಿಶ್ ಮಾಡಿಕೊಟ್ಟು ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತಾ, ಅಲ್ಲೂ ತಮ್ಮ ಮಾನಸಿಕ ಹಾಗೂ ದೈಹಿಕ ಶ್ರಮವನ್ನೇ ಆಶ್ರಯಿಸಿ ಬದುಕು ನಡೆಸುತ್ತಿದ್ದ ಚರ್ಮಕಾರರ ಜೀವನೋಪಾಯಕ್ಕೆ ಅನುಕೂಲವಾಗುವಂತೆ ಸರಕಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಬೆರಳೆಣಿಕೆಯಷ್ಟು ಚರ್ಮಕುಟೀರಗಳನ್ನು ಹಂಚಿಕೆ ಮಾಡಿದ್ದಾಗ್ಯೂ ಅವು ಕಾರ್ಯಾಚರಣೆಗೊಳ್ಳುವಷ್ಟರಲ್ಲೇ ರಸ್ತೆ ವಿಸ್ತರಣೆ, ಮೇಲ್ಸೇತುವೆ ನಿರ್ಮಾಣ, ಮೆಟ್ರೊ ಕಾಮಗಾರಿ, ಜನದಟ್ಟಣೆ, ಸಂಚಾರ ದಟ್ಟಣೆ ಇತ್ಯಾದಿ ನೆಪಗಳನ್ನು ಮುಂದು ಮಾಡಿ ಅಂತಹ ಚರ್ಮ ಕುಟೀರಗಳನ್ನು ತೆರವುಗೊಳಿಸುತ್ತಿರುವುದರಿಂದ ಆ ಕುಟುಂಬಗಳ ಜೀವನೋಪಾಯಕ್ಕೆ ಪರ್ಯಾಯ ಮಾರ್ಗಗಳನ್ನು ರೂಪಿಸಿಕೊಡದಿದ್ದರೆ ಆ ಕುಟುಂಬಗಳು ಆರ್ಥಿಕವಾಗಿ ಸಶಕ್ತರಾಗುವುದೆಂತು? ಒಂದು ಕಡೆ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು, ಬೃಹತ್ ಚರ್ಮ ಕೈಗಾರಿಕೋದ್ಯಮಿಗಳು ದೊಡ್ಡ ದೊಡ್ಡ ಶೋರೂಂಗಳನ್ನು ತೆರೆದು ಅತಿ ಹೆಚ್ಚಿನ ಬೆಲೆಗಳನ್ನು ನಿಗದಿ ಮಾಡಿ ಮಾರಾಟ ವ್ಯವಸ್ಥೆಯನ್ನು ಜೋಪಾನ ಮಾಡಿಕೊಳ್ಳುತ್ತಿವೆಯಾದರೂ, ಸ್ಥಳೀಯವಾಗಿ ತಮ್ಮ ಕರ ಕುಶಲತೆ ಹಾಗೂ ಜಾಣ್ಮೆಯಿಂದ ಪಾದರಕ್ಷೆಗಳಿಗೆ ಜೀವ ತುಂಬಿ ಬದುಕು ಕಟ್ಟಿಕೊಂಡಿದ್ದ ಚರ್ಮಕಾರರ ಬದುಕನ್ನು ಇಂತಹ ಬೃಹತ್ ಪಾದರಕ್ಷೆ ತಯಾರಿಕಾ ಘಟಕಗಳು, ಮಾರಾಟ ಮಳಿಗೆಗಳು ನಾಶಗೊಳಿಸುತ್ತಿರುವುದನ್ನು ಕಂಡರೆ ವಿಷಾದವಾಗುತ್ತದೆ. ಇಂತಹ ಸಂದರ್ಭಗಳನ್ನು ಎದುರಿಸಲು ಸಶಕ್ತವಲ್ಲದ ಚರ್ಮಕಾರರ ಕೌಶಲ್ಯಕ್ಕೆ, ಶ್ರಮಶಕ್ತಿಗೆ ಸರಕಾರಗಳು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ನೆರವಾಗಲೇಬೇಕು. ಇಲ್ಲವಾದರೆ, ಆರ್ಥಿಕಾಭಿವೃದ್ಧಿ ಎಂಬುದು ಕೇವಲ ಶ್ರೀಮಂತರ, ಬಂಡವಾಳಶಾಹಿಗಳ ಬೆಳವಣಿಗೆಗೆ ಮಾತ್ರವೇ ಉಳಿಯುವಂತಾಗುತ್ತದೆ. ಶೋಷಿತ ಸಮುದಾಯಗಳ ಆರ್ಥಿಕಾಭಿವೃದ್ದಿಯ ಸಲುವಾಗಿ ಪ್ರತೀ ವರ್ಷದ ಆಯವ್ಯಯದಲ್ಲಿ ಇಂತಿಷ್ಟು ಅನುದಾನವನ್ನು ನೀಡುತ್ತಾ ಬಂದಿರುವ ಸರಕಾರಗಳ ಯೋಜನೆಗಳು ಅನೇಕ ಬಾರಿ ದೂರದೃಷ್ಟಿಯಿಲ್ಲದ, ಜಾತೀಯತೆಯ ಪೂರ್ವಾಗ್ರಹವುಳ್ಳ ಅಥವಾ ಯಥಾಸ್ಥಿತಿವಾದಿಗಳ ಕೈಗೆ ಸಿಲುಕಿದರೆ ಅವು ಯಶಸ್ವಿಯಾಗದೆ ಉಳಿಯುವುದಲ್ಲದೆ ಅನುದಾನ ಸದ್ಬಳಕೆಯಾಗದೆ ಆರ್ಥಿಕ ವರ್ಷದ ಅಂತ್ಯದಲ್ಲಿ ಹಿಂದಿರುಗಿಸಲ್ಪಡುವ, ಇಲ್ಲವೆ ಅನ್ಯ ಉದ್ದೇಶಗಳಿಗೆ ದುರ್ಬಳಕೆಯಾಗಿಬಿಡುವ ಸನ್ನಿವೇಶಗಳು ಇಲ್ಲದಿಲ್ಲ. ಸಮಯೋಚಿತವಾಗಿ ಕ್ರಿಯಾ ಯೋಜನೆ ರೂಪಿಸುವ, ಪ್ರಾಮಾಣಿಕತೆಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡುವ, ಸಕಾಲದಲ್ಲಿ ಸಾಲ/ಸಬ್ಸಿಡಿ ಸಹಾಯಧನವನ್ನು ಫಲಾಪೇಕ್ಷಿಗಳಿಗೆ ತಲುಪಿಸುವ ಕಳಕಳಿ ಮತ್ತು ಇಚ್ಛಾಸಕ್ತಿಯುಳ್ಳ ಅಧಿಕಾರಿಗಳಿಂದ ತಳ ಸಮುದಾಯಗಳ ಆರ್ಥಿಕಾಭಿವೃಧ್ದಿ ಮತ್ತು ಸಾಮಾಜಿಕ ಸ್ಥಿತಿಗತಿ ಸುಧಾರಣೆಗೊಳ್ಳಬಹುದಾಗಿದೆ. ಇಂತಹ ಬದ್ಧತೆಗಳಿದ್ದಲ್ಲಿ ಮಾತ್ರ ನಿರೀಕ್ಷಿತ ಪ್ರಗತಿಯನ್ನು ಕಾಣಬಹುದು. ಇಲ್ಲವಾದಲ್ಲಿ ಮತ್ತದೇ ಕೊರಗು, ಸಂಕಟ ಮುಂದುವರಿಯುತ್ತಲೇ ಇರುತ್ತದೆ.

ಸಾಮಾಜಿಕ ಬದುಕಿನಲ್ಲಿ ದೈಹಿಕ ಶ್ರಮವನ್ನಾಧರಿಸಿರುವ ಅಸಂಖ್ಯ ದಲಿತ ಕುಟುಂಬಗಳು ಇಂದಿಗೂ ಅಸಂಘಟಿತರಾಗಿದ್ದು ಆ ಕುಟುಂಬಗಳಿಗೆ ಅಭಿವೃದ್ಧಿ ನಿಗಮಗಳಿಂದ ಸಾಲ/ಸಬ್ಸಿಡಿ ನ್ಯಾಯೋಚಿತವಾಗಿ ದೊರೆತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಇರುವ ಅಡ್ಡಿ ಆತಂಕಗಳನ್ನು ನಿವಾರಿಸಬೇಕಾಗಿದೆ. ಕೇವಲ ಕಮಿಷನ್/ ದಿನಭತ್ತೆ ಅಥವಾ ದಿನಗೂಲಿಯಿಂದ ಜೀವನೋಪಾಯವನ್ನು ಕಂಡುಕೊಂಡಿರುವ ಈ ಸಮುದಾಯದ ದೈಹಿಕ ಶ್ರಮಕ್ಕೆ ಮನ್ನಣೆ ದೊರೆತು ಆರ್ಥಿಕಾಭಿವೃದ್ಧಿ ಹೊಂದಲು ಕೇಂದ್ರ, ರಾಜ್ಯ ಸರಕಾರಗಳು/ ಸ್ಥಳೀಯ ಸಂಸ್ಥೆಗಳು ನೆರವು ನೀಡಿ ಸಮುದಾಯವನ್ನು ಅಭಿವೃದ್ಧಿಯ ದಿಕ್ಕಿನತ್ತ ಕೊಂಡೊಯ್ಯಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ ಎಂಬ ಮಾತಿಗೆ ಒಂದಷ್ಟು ಮನ್ನಣೆ ದೊರೆಯಬಹುದು.

Writer - ಗೌಡಗೆರೆ ಮಾಯುಶ್ರೀ

contributor

Editor - ಗೌಡಗೆರೆ ಮಾಯುಶ್ರೀ

contributor

Similar News