ನಾಡಗೀತೆಯ ಯಾವುದೇ ಶಬ್ದ ಬಿಡದೆ ರಾಗಸಂಯೋಜನೆ: ಸಚಿವ ಸುನೀಲ್

Update: 2022-09-24 12:24 GMT

ಉಡುಪಿ : ನಾಡಗೀತೆಯ ರಾಗ ಸಂಯೋಜನೆ, ಕಾಲಮಿತಿ ಬಗ್ಗೆ 2005ರಿಂದ ಸ್ಪಷ್ಟತೆ ಇರಲಿಲ್ಲ. ಈ ಕುರಿತು ರಚಿಸಲಾದ ಎಚ್.ಆರ್.ಲೀಲಾವತಿ ನೇತೃತ್ವದ ಸಮಿತಿ  ಮೈಸೂರಿನ ಅನಂತ ಸ್ವಾಮಿ ಅವರ ರಾಗಸಂಯೋಜನೆಯಡಿ 2.30ನಿಮಿಷ ಗಳಲ್ಲಿ ಕುವೆಂಪು ಬರೆದ ನಾಡಗೀತೆ ಯಾವುದೇ ಶಬ್ದವನ್ನು ಬಿಡದೆ ಹಾಡಲು ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಅದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಪ್ಪಿ ಮುಖ್ಯಮಂತ್ರಿ ಅವರಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರಿ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮದಲ್ಲಿ ಕಾಲಮಿತಿ, ರಾಗದ ಬಗ್ಗೆ ಸ್ಪಷ್ಟತೆ ಇರದೆ ನಾಡಗೀತೆಯನ್ನು 6-7ನಿಮಿಷಗಳ ಕಾಲ ಕೂಡ ಹಾಡಲಾಗುತಿತ್ತು. ಇದಕ್ಕೆಲ್ಲ ಅಂತ್ಯ ಹಾಡುವ ಹಿನ್ನೆೆಲೆಯಲ್ಲಿ ಕಳೆದ 18 ವರ್ಷಗಳಿಂದ ಚರ್ಚೆ ಯಲ್ಲಿದ್ದ ಗೊಂದಲದ ಬಗ್ಗೆ ಸರಕಾರ ಸ್ಪಷ್ಟ ನಿಲುವು ತೆಗೆದುಕೊಂಡಿದೆ. ನಾಡ ಗೀತೆಯು ಕರ್ನಾಟಕದ ಅಸ್ಮಿತೆಯ ಪ್ರಶ್ನೆ. ಕರ್ನಾಟಕವನ್ನು ಗೌರವಿಸುವ ಕಾರ್ಯ ವನ್ನು ನಾಡಗೀತೆ ಮೂಲಕ ನಾವು ಮಾಡುತ್ತಿದ್ದೇವೆ. ಬರಗೂರು ರಾಮಚಂದ್ರ, ಬೈರಪ್ಪ ಸಹಿತ ಎಲ್ಲ ಸಾಹಿತಿಗಳು ನಮ್ಮ ನಿಲುವನ್ನು ಸ್ವಾಗತಿಸಿದ್ದಾರೆ ಎಂದರು.

ವಿದ್ಯುತ್ ಬಿಲ್ ಏರಿಕೆ ವರ್ಷಕ್ಕೆ ಒಂದು ಬಾರಿ ನಡೆಯುತ್ತದೆ. ಕಲ್ಲಿದ್ದಲು, ಇಂದನ ಬೆಲೆ ಏರಿಕೆಗೆ ಹೊಂದಾಣಿಕೆ ಮಾಡಿ ವಿದ್ಯುತ್ ದರ ನಿಗದಿ ಮಾಡುವ ಬಗ್ಗೆ 2015ರಲ್ಲಿ ಅಂದಿನ ಸರಕಾರ ಅನುಮೋದನೆ ಮಾಡಿತ್ತು. ಅದರಂತೆ ಕಳೆದ 9 ವರ್ಷಗಳಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಕಲ್ಲಿದ್ದಲು ದರ ನಿಗದಿಯಾಗು ತ್ತದೆ. ಕಲ್ಲಿದ್ದಲು ಬೆಲೆ ಹೊಂದಾಣಿಕೆಗೋಸ್ಕರ ಬೆಲೆ ಏರಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News