ವಿಧಾನಸಭೆಯಲ್ಲಿ ಇಸ್ಪೀಟ್ ಆಡಿದ, ತಂಬಾಕು ಜಗಿದ ಬಿಜೆಪಿ ಶಾಸಕರು: ಆರೋಪ

Update: 2022-09-24 13:38 GMT
Photo: Twitter/@RLDparty/@MediaCellSP 

ಹೊಸದಿಲ್ಲಿ: ಬಿಜೆಪಿಯ(BJP) ಮಹೋಬಾ ಕ್ಷೇತ್ರದ ಶಾಸಕ ರಾಕೇಶ್‌ ಕುಮಾರ್‌ ಗೋಸ್ವಾಮಿ ಅವರು ಉತ್ತರ ಪ್ರದೇಶ ವಿಧಾನಸಭಾ( Uttar Pradesh assembly) ಅಧಿವೇಶನ ನಡೆಯುತ್ತಿದ್ದ ವೇಳೆ ಸದನದೊಳಗೆ ಕಾರ್ಡ್‌ ಗೇಮ್‌ ಆಡುತ್ತಿದ್ದರು ಎಂಬುದನ್ನು ತೋರಿಸುವ ಕಿರು ವೀಡಿಯೋ ಕ್ಲಿಪ್‌ ಅನ್ನು ಇಂದು ಜಯಂತ್‌ ಚೌಧುರಿ ನೇತೃತ್ವದ ರಾಷ್ಟ್ರೀಯ ಲೋಕ ದಳ(Jayant Chaudhary-led Rashtriya Lok Dal) ಪೋಸ್ಟ್‌ ಮಾಡಿ ಆಡಳಿತ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಈ ವೀಡಿಯೋದಲ್ಲಿ ಗೋಸ್ವಾಮಿ ಅವರನ್ನು ಹೋಲುವ ವ್ಯಕ್ತಿಯೊಬ್ಬ ವಿಧಾನಸಭಾ ಕಲಾಪವನ್ನು ಕೇಳಲು ಬಳಸಲಾಗುವ ಹೆಡ್‌ ಫೋನ್‌ ಹಾಕಿಕೊಂಡಿರುವಂತೆಯೇ ತನ್ನ ಸ್ಮಾರ್ಟ್‌ ಫೋನ್‌ನಲ್ಲಿ ಕಾರ್ಡ್‌ ಗೇಮ್‌ ಆಡುವುದು ಕಾಣಿಸುತ್ತದೆ.

ʻʻವಿಧಾನಸಭೆಯಲ್ಲಿ ತೀನ್‌ ಪತ್ತಿ ಆಡುತ್ತಿರುವ ವ್ಯಕ್ತಿ ಮಹೋಬ ಕ್ಷೇತ್ರದ ಬಿಜೆಪಿ ಶಾಸಕ... ಇವರ ಕೃತ್ಯ ಸದನದಲ್ಲಿ ಅವರು ಪಡುತ್ತಿರುವ ಶ್ರಮಕ್ಕೆ ಮತ್ತು ಜನರ ಸಮಸ್ಯೆಯನ್ನು ಎತ್ತುವ ಸದನದ ಮಾನ್ಯ ಸದಸ್ಯರ ಬಗ್ಗೆ ಅವರ ಧೋರಣೆಯ ಉದಾಹರಣೆಯಾಗಿದೆ. ಇದು ಬಿಜೆಪಿಯ ಧೋರಣೆ ಹಾಗೂ ಅದರ ಜನಪ್ರತಿನಿಧಿಗಳ ಸಾರ್ವಜನಿಕ ಸೇವೆಯ ಮುಖವಾಗಿದೆ,ʼʼ ಎಂದು ರಾಷ್ಟ್ರೀಯ ಲೋಕದಳ ಟ್ವೀಟ್‌ ಮಾಡಿದೆ.

ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ ಕೂಡ ಈ ವೀಡಿಯೋ ಪೋಸ್ಟ್‌ ಮಾಡಿ ಸದನದ ಘನತೆಗೆ ಕುಂದುಂಟು ಮಾಡಿದೆ ಎಂದು ಬಿಜೆಪಿಯ ವಿರುದ್ಧ ಕಿಡಿ ಕಾರಿದೆ. ಪಕ್ಷ ಇನ್ನೊಂದು ವೀಡಿಯೋ ಪೋಸ್ಟ್‌ ಮಾಡಿದೆಯಲ್ಲದೆ ಅದರಲ್ಲಿ ವಿಧಾನಸಭಾ ಅಧಿವೇಶನದ ವೇಳೆ ಝಾನ್ಸಿ ಬಿಜೆಪಿ ಶಾಸಕ ರವಿ ಶರ್ಮ ತಂಬಾಕು ಜಗಿಯುತ್ತಿರುವುದು ಕಾಣಿಸುತ್ತದೆ ಎಂದು ಹೇಳಿದೆ.

ʻʻಬಿಜೆಪಿ ಶಾಸಕ, ರಜನೀಗಂಧ ಮತ್ತು ತುಳಸಿಯನ್ನು ಮಿಶ್ರಣ ಮಾಡಿ ಕ್ಯಾನ್ಸರ್‌ ಉತ್ತೇಜಿಸುತ್ತಿದ್ದಾರೆ,ʼʼ ಎಂದು ಸಮಾಜವಾದಿ ಪಕ್ಷ ಬರೆದಿದೆಯಲ್ಲದೆ ಮುಖ್ಯಮಂತ್ರಿ ಆದಿತ್ಯನಾಥ್‌ ಅವರನ್ನು ಉಲ್ಲೇಖಿಸಿ- ʻʻಯೋಗೀಜಿ, ಮುಂದೆ ಸದನದಲ್ಲಿ ನಿಮ್ಮ ಶಾಸಕರು ಹಾಗೂ ಸಚಿವರು ಅಕ್ರಮ ಮದ್ಯ  ಸೇವಿಸುತ್ತಾರೆಯೇ ಹಾಗೂ ಮರಿಜುವಾನಾ ಸೇದುತ್ತಾರೆಯೇ?,ʼʼ ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News