ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಗೆ ವಿದ್ಯುತ್ ದರ ಏರಿಕೆಯ ಬರೆ: ರಮೇಶ್ ಕಾಂಚನ್ ಟೀಕೆ

Update: 2022-09-24 14:21 GMT

ಉಡುಪಿ, ಸೆ.24: ದಸರಾ ಹಾಗೂ ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಜನತೆಗೆ ರಾಜ್ಯ ಸರಕಾರ ಕರೆಂಟ್ ದರ ಏರಿಸುವ ಮೂಲಕ ಅನಿರೀಕ್ಷಿತ ಶಾಕ್‌ನ ಬಿಸಿ ಮುಟ್ಟಿಸಿದೆ. ಈಗಾಗಲೇ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ವಿದ್ಯುತ್ ದರ ಏರಿಸಿ ಗಾಯದ ಮೇಲೆ ಬರೆ ಏಳೆದಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಟೀಕಿಸಿದ್ದಾರೆ.

ಅ.1ರಿಂದಲೇ ಗ್ರಾಹಕರಿಗೆ ವಿದ್ಯುತ್ ಶುಲ್ಕದ ಹೊರೆ ಬೀಳಲಿದೆ. ಕಳೆದ ಎಪ್ರಿಲ್ ತಿಂಗಳಿನಲ್ಲಷ್ಟೇ ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳೂ ವಿದ್ಯುತ್ ದರ ಏರಿಕೆ ಮಾಡಿದ್ದರೂ ಇದೀಗ ಮತ್ತೊಮ್ಮೆ ದರ ಏರಿಸಿದರುವುದು ಖೇದಕರ ಎಂದು ನಗರಸಭೆಯಲ್ಲಿ ವಿಪಕ್ಷದ ನಾಯಕರೂ ಆಗಿರುವ ರಮೇಶ್ ಕಾಂಚನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಇಂಧನ ವೆಚ್ಚ ಶುಲ್ಕದ ಬಿಸಿ ಗ್ರಾಹಕರಿಗೆ ಮುಟ್ಟಲಿದ್ದು, ಪ್ರತಿ ಯೂನಿಟ್ ಮೇಲೆ ೪೩ ಪೈಸೆ ದರ ಏರಿಕೆಯಾಗಲಿದೆ. ಮುಂದಿನ ವರ್ಷ ಮಾರ್ಚ್‌ವರೆಗೆ ಈ ದರ ಇರಲಿದೆ. ಈಗಾಗಲೇ ರಾಜ್ಯದಲ್ಲಿ ಉತ್ತಮ ಮಳೆ ಯಾಗಿದೆ. ವಿದ್ಯುತ್ ಉತ್ಪಾದನೆ ಉತ್ತಮವಾಗಿದೆ. ಅದರ ಹೊರತಾಗಿಯೂ ವಿದ್ಯುತ್ ಖರೀದಿಗೆ ೧೨೪೪ ಕೋಟಿ ಹೆಚ್ಚಳವಾಗಿದೆ ಎಂಬುದು ಅಚ್ಚರಿಯ ಸಂಗತಿ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಯವರೇ ಆದ ಸುನಿಲ್‌ಕುಮಾರ್ ಇಂಧನ ಖಾತೆಯ ಸಚಿವರಾಗಿದ್ದು, ವಿದ್ಯುತ್ ದರ ಏರಿಸುವ ಬದಲು ಜನಪರ ನಿಲುವು ತಾಳಿ ವಿದ್ಯುತ್ ದರವನ್ನು ತಕ್ಷಣ ಹಿಂಪಡೆಯಬೇಕು ಎಂದು ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News