ಮುದ್ರಾಡಿಯಲ್ಲಿ ಸೆ.25ರಿಂದ ದಸರಾ ಮಹೋತ್ಸವ, ನವರಂಗೋತ್ಸವ

Update: 2022-09-24 16:39 GMT
ಸಾಂದರ್ಭಿಕ ಚಿತ್ರ

ಉಡುಪಿ, ಸೆ.24: ಹೆಬ್ರಿ ತಾಲೂಕಿನ ಮುದ್ರಾಡಿ ನಾಟ್ಕದೂರಿನಲ್ಲಿ ಅಭಯ ಹಸ್ತೆ ಆದಿಶಕ್ತಿ ಶ್ರೀಕ್ಷೇತ್ರದ 51ನೇ ವರ್ಷದ ದಸರಾ ಮಹೋತ್ಸವ ಹಾಗೂ ನಮ ತುಳುವೆರ್ ಕಲಾಸಂಘಟನೆಯ 22ನೇ ವರ್ಷದ ನವರಂಗೋತ್ಸವ ಹಾಗೂ ನಾಟ್ಕ ಮುದ್ರಾಡಿಯ 37ನೇ ವರ್ಷದ ಅವ್ವ ನನ್ನವ್ವ ರಂಗೋತ್ಸವ ಇದೇ ಸೆ.25ರಿಂದ ಅ.6ರವರೆಗೆ ನಡೆಯಲಿದೆ ಎಂದು ಶ್ರೀಕ್ಷೇತ್ರ ಮುದ್ರಾಡಿಯ ಧರ್ಮಾಧಿಕಾರಿ ಸುಕುಮಾರ್ ಮೋಹನ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವವು ಸೆ.25ರಿಂದ ಅ.6ರವರೆಗೆ ದೇವಳದಲ್ಲಿ ನಡೆದರೆ, ನವರಂಗೋತ್ಸವ ಹಾಗೂ ಅವ್ವ ನನ್ನವ್ವ ರಂಗೋತ್ಸವ ನಾಟ್ಕದೂರಿನ ಬಿ.ವಿ.ಕಾರಂತ ಬಯಲು ರಂಗಸ್ಥಳದಲ್ಲಿ ಸೆ.26ರಿಂದ ಅ.5ರವರೆಗೆ ನಡೆಯಲಿದೆ ಎಂದರು.

ದೇವಳದಲ್ಲಿ ಸೆ.25ರ ಬೆಳಗ್ಗೆ 6ರಿಂದ ಮರುದಿನ ಬೆಳಗ್ಗೆ 6ಗಂಟೆಯವರೆಗೆ ಸತತ 24 ಗಂಟೆಗಳ ಕಾಲ ನಿರಂತರ ಭಜನೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಜಿಲ್ಲೆಯ ಒಟ್ಟು 20 ತಂಡಗಳು ಪಾಲ್ಗೊಳ್ಳಲಿವೆ. ದುರ್ಗಾಹೋಮ ಹಾಗೂ ಚಂಡಿಕಾ ಹೋಮವೂ ನಡೆಯಲಿದೆ. ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. 

22ನೇ ವರ್ಷದ ನವರಂಗೋತ್ಸವ ಅವ್ವ ನನ್ನವ್ವ ರಂಗೋತ್ಸವವನ್ನು ಸೆ.26ರ ಸಂಜೆ 7ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್ ಉದ್ಘಾಟಿಸುವರು. ಡಾ.ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ  ಹಾಗೂ ಗಣ್ಯರು ಪಾಲ್ಗೊಳ್ಳುವರು ಎಂದರು.

ಇದೇ ವೇಳೆ ಯುವ ರಂಗನಟ ಹಾಗೂ ನಿರ್ದೇಶಕ ಉತ್ತರ ಕನ್ನಡ ಸಿದ್ಧಾಪುರದ ಗುರುಮೂರ್ತಿ ವಿ.ಎಸ್.ಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅದೇ ರೀತಿ ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ, ನೇತ್ರತಜ್ಞ ಡಾ.ಕೃಷ್ಣಪ್ರಸಾದ್ ಸೇರಿದಂತೆ ಏಳು ಮಂದಿಗೆ ಕರ್ಣಾಟ ನಾಡ ಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸುಕುಮಾರ್ ಮೋಹನ್ ತಿಳಿಸಿದರು.

ಅನಂತರ ಪ್ರತಿದಿನ ಸಂಜೆ ಜಿಲ್ಲೆಯ ಖ್ಯಾತ ರಂಗ ತಂಡಗಳಿಂದ ನಾಟಕಗಳ ಪ್ರದರ್ಶನ, ಯಕ್ಷಗಾನ, ಯಕ್ಷ-ದಾಸ-ಗಾನ ವೈಭವ ನಡೆಯಲಿದ್ದು, ಅ.4ರಂದು ರಂಗೋತ್ಸವದ ಸಮಾರೋಪ ಸಮಾರಂಭ ಸಂಜೆ ನಡೆಯಲಿದೆ. ಇದರಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲಿದ್ದಾರೆ. ಅ.5ರಂದು ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಕ್ಷೇತ್ರದ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News