ಪ್ರತಿ ದಿನ 10 ಲಕ್ಷ ಆಯುಷ್ಮಾನ್ ಭಾರತ್ ಕಾರ್ಡ್‌ಗಳ ವಿತರಣೆ ಕೇಂದ್ರದ ಗುರಿ: ಮನ್‌ಸುಖ್ ಮಾಂಡವೀಯ

Update: 2022-09-25 18:08 GMT

ಹೊಸದಿಲ್ಲಿ, ಸೆ.25:  ಕೇಂದ್ರ ಸರಕಾರವು ತನ್ನ ಮಹತ್ವಾಕಾಂಕ್ಷೆಯ  ಆರೋಗ್ಯ ಯೋಜನೆಯಾದ ‘ಎಬಿಪಿಎಂ-ಜೆ’ ಮೂಲಕ ಪ್ರತಿ ದಿನವೂ 10 ಲಕ್ಷ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ರವಿವಾರ ತಿಳಿಸಿದ್ದಾರೆ. ಈವರೆಗೆ 3.95 ಕೋಟಿ ಮಂದಿ ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದು ಒಟ್ಟು 45,294 ಕೋಟಿ ರೂ. ವೆಚ್ಚವಾಗಿದೆ ಎಂದು ಅವರು ಹೇಳಿದ್ದಾರೆ.

ಈವರೆಗೆ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು , 19 ಕೋಟಿಗೂ ಅಧಿಕ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದವರು ಹೇಳಿದ್ದಾರೆ. ಮಾಂಡವೀಯ ಅವರು ಆಯುಷ್ಮಾನ್ ಬಾರತ ಪ್ರಧಾನ ಮಂತ್ರಿ - ಜನ ಆರೋಗ್ಯ ಯೋಜನೆ (ಎಬಿಪಿಎಂ-ಜಯ್)ಯ ಅನುಷ್ಠಾನಕ್ಕೆ ನಾಲ್ಕು  ವರ್ಷ  ಹಾಗೂ ಆಯುಷ್ಮಾನ್ ಭಾರತ ಡಿಜಿಟಲ್ ಮಿಶನ್ ಯೋಜನೆ (ಎಬಿಡಿಎಂ)ಗೆ ಒಂದು ವರ್ಷದ ತುಂಬಿರುವ ಹಿನ್ನೆಲೆಯಲ್ಲಿ  ರವಿವಾರ ಹೊಸದಿಲ್ಲಿಯಲ್ಲಿ ಆಯೋಜಿಸಲಾದ  ‘ಆರೋಗ್ಯ ಮಂಥನ 2022’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

‘‘ಈ ಮೊದಲು ದಿನಂಪ್ರತಿ 1ರಿಂದ 1.5 ಲಕ್ಷ ಆಯುಷ್ಮಾನ್ ಕಾರ್ಡ್‌ಗಳನ್ನು  ವಿತರಿಸಲಾಗುತ್ತಿತ್ತು. ಇದೀಗ4ರಿಂದ 5 ಲಕ್ಷದಷ್ಟು ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ.  ಪ್ರತಿ ದಿನವೂ 10 ಲಕ್ಷಕ್ಕೂಅ ಧಿಕ ಕಾರ್ಡ್‌ಗಳನ್ನು ವಿತರಿಸುವಂತೆ ಮಾಡುವುದೇ ನನ್ನ ಗುರಿಯಾಗಿದೆ’’ ಎಂದು ಮಾಂಡವೀಯ ತಿಳಿಸಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆಯಡಿ, ದೇಶದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಪ್ರತಿ ಜಿಲ್ಲೆಯಲ್ಲೂ 100 ಕೋಟಿ ರೂ.ಗಳನ್ನು ವ್ಯಯಿಸಲಾಗುವುದು ಎಂದು ಅವರು ತಿಳಿಸಿದರು.

‘‘ದೇಶದಲ್ಲಿ ಆರೋಗ್ಯ ಪಾಲನಾ ಸೌಲಭ್ಯಗಳು ಎಲ್ಲರಿಗೂ ಕೈಗೆಟಕುವಂತೆ ಹಾಗೂ ಲಭ್ಯವಾಗುವಂತೆ ಮಾಡುವ ಅಗತ್ಯವನ್ನು  ಮಾಂಡವೀಯ ಅವರು ಸಭೆಯಲ್ಲಿ ಪ್ರತಿಪಾದಿಸಿದರು. ರಾಜ್ಯಗಳು ಹಾಗೂ ಖಾಸಗಿ ವ್ಯಕ್ತಿಗಳ ಸಹಕಾರದೊಂದಿಗೆ ‘ಎಬಿಪಿಎಂ ಜನ ಆರೋಗ್ಯ ಯೋಜನೆ’ ಹಾಗೂ ‘ಆಯುಷ್ಮಾನ್ ಭಾರತ ಡಿಜಿಟಲ್ ಮಿಶನ್ ಯೋಜನೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕೆಂದು ಅವರು ಕರೆ ನೀಡಿದರು.

ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಗೆ ದೇಶದ ಶೇ.46ರಷ್ಟು ಅಂದರೆ 28300ಕ್ಕೂ ಅಧಿಕ ಆಸ್ಪತ್ರೆಗಳನ್ನು ಒಳಪಡಿಸಲಾಗಿದೆ. ಈ ಯೋಜನೆಯಡಿ  ಒಟ್ಟು 3.8 ಕೋಟಿ ಫಲಾನುಭವಿಗಳು  ಆಸ್ಪತ್ರೆಗೆ ದಾಖಲಾಗಿದ್ದು, ಅವುಗಳಲ್ಲಿ ಶೇ.46ಷ್ಟು ಸರಕಾರಿ ಆಸ್ಪತ್ರೆಗಳಾಗಿವೆ.

ಈ ಯೋಜನೆಯಡಿ ಆಸ್ಪತ್ರೆಗೆ ದಾಖಲಾದವರಲ್ಲಿ ಶೇ.52 ಮಂದಿ ಪುರುಷರು. ಆಸ್ಪತ್ರೆಗೆ ದಾಖಲಾದ ಒಟ್ಟು ರೋಗಿಗಳ ಪೈಕಿ ಶೇ.27ರಷ್ಟು ಮಂದಿ 45 ಹಾಗೂ 59 ವರ್ಷ ನಡುವಿನ ವಯಸ್ಸಿನವರಾಗಿದ್ದಾರೆ. ಶೇ.24 ಮಂದಿ 3-44 ವರ್ಷ ವಯೋಗುಂಪಿನವರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ   ಅಂಕಿ ಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News