ಹಕ್ಕಿ ಢಿಕ್ಕಿ: ಕಣ್ಣೂರಿನಲ್ಲೇ ಇಳಿದ ದೆಹಲಿಗೆ ತೆರಳುತ್ತಿದ್ದ ವಿಮಾನ

Update: 2022-09-27 01:45 GMT
ಸಾಂದರ್ಭಿಕ ಚಿತ್ರ

ಕಣ್ಣೂರು: ಕೋಝಿಕ್ಕೋಡ್‍ನಿಂದ ದೆಹಲಿಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ ಹೊಡೆದ ಪರಿಣಾಮ, ವಿಮಾನವನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲೇ ಲ್ಯಾಂಡಿಂಗ್ ಮಾಡಿದ ಘಟನೆ ಸೋಮವಾರ ನಡೆದಿದೆ.

ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಹಕ್ಕಿ ಢಿಕ್ಕಿ ಹೊಡೆಯಿತು. ಇದರ ಪರಿಣಾಮ ವಿಮಾನವನ್ನು ತಪಾಸಣೆ ಮತ್ತು ನಿರ್ವಹಣೆಗಾಗಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.

135 ಮಂದಿ ಪ್ರಯಾಣಿಕರೊಂದಿಗೆ ಕೋಝಿಕ್ಕೋಡ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನವನ್ನು ದೆಹಲಿಗೆ ತೆರಳುವ ಮುನ್ನ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. 135 ಮಂದಿ ಪ್ರಯಾಣಿಕರಲ್ಲಿ 85 ಮಂದಿ ಕೋಝಿಕ್ಕೋಡ್‍ನವರು ಹಾಗೂ 50 ಮಂದಿ ಕಣ್ಣೂರಿನವರಾಗಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ನಿಲ್ದಾಣದ ಠಾಣಾಧಿಕಾರಿ ವಿವರಿಸಿದ್ದಾರೆ.

ಸಾಗರೋತ್ತರ ಪ್ರದೇಶಗಳಿಗೆ ತೆರಳಬೇಕಿದ್ದ ಪ್ರಯಾಣಿಕರಿಗೆ ಏರ್‍ಲೈನ್ಸ್ ಬೇರೆ ವಿಮಾನಗಳಲ್ಲಿ ವ್ಯವಸ್ಥೆ ಮಾಡಿದೆ. ದೆಹಲಿಗೆ ತೆರಳಬೇಕಿದ್ದ ಪ್ರಯಾಣಿಕರನ್ನು ಕಣ್ಣೂರಿನ ಎರಡು ಹೋಟೆಲ್‍ಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದ್ದು, ಮಂಗಳವಾರ ಅವರ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News