ಮಲಯಾಳಂ ನಟ ಶ್ರೀನಾಥ್‌ ಭಾಸಿಯನ್ನು ನಿಷೇಧಿಸಿದ ನಿರ್ಮಾಪಕರ ಸಂಘ

Update: 2022-09-27 15:12 GMT
ಶ್ರೀನಾಥ್‌ ಭಾಸಿ (Photo: @ANI)

ತಿರುವನಂತಪುರಂ: ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಬಂಧನಕ್ಕೊಳಗಾಗಿದ್ದ ಮಲಯಾಳಂ ನಟ ಶ್ರೀನಾಥ್ ಭಾಸಿಯವರನ್ನು(Sreenath Bhasi) ಕೇರಳ(Kerala) ಚಲನಚಿತ್ರ ನಿರ್ಮಾಪಕರ ಸಂಘ (ಕೆಎಫ್‌ಪಿಎ) ಮಂಗಳವಾರ ತಾತ್ಕಾಲಿಕವಾಗಿ ನಿಷೇಧಿಸಿದೆ. ಆದಾಗ್ಯೂ, ತನ್ನ ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಅನುಮತಿಸಲಾಗಿದೆ.

ಶ್ರೀನಾಥ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವರ ವರ್ತನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಕೆಎಫ್‌ಪಿಎ ಕಾರ್ಯಕಾರಿ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿವರಣೆಗಾಗಿ ಅವರನ್ನು ಕರೆದಾಗ ಅವರು ತುಂಬಾ ಜವಾಬ್ದಾರಿಯುತವಾಗಿ ಮತ್ತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದು ಅವರು ಹೇಳಿದ್ದಾರೆ. ವಿವಾದದ ನಂತರ ಅವರು ಪ್ರತಿಕ್ರಿಯಿಸುತ್ತಿರುವ ರೀತಿಯಿಂದ ನಮಗೆ ಸಂತೋಷವಾಗಿದೆ ಎಂದು ಸಂಘವು ಹೇಳಿದೆ. ಆದರೆ ಶ್ರೀನಾಥ್ ವಿರುದ್ಧ ಕ್ರಮ ಕೈಗೊಳ್ಳುವುದು ಸಂಘದ ಕರ್ತವ್ಯ ಎಂದು ಅವರು ಹೇಳಿದ್ದಾರೆ.

ಸಿನಿಮಾ ಪ್ರಚಾರದ ಸಂದರ್ಶನವೊಂದರಲ್ಲಿ ಮಹಿಳಾ ನಿರೂಪಕಿಗೆ ಅವಮಾನ ಮಾಡಿದ ಆರೋಪದ ಮೇಲೆ ಶ್ರೀನಾಥ್ ಭಾಸಿ ಪೊಲೀಸ್ ತನಿಖೆಯನ್ನು ಕೂಡ ಎದುರಿಸುತ್ತಿದ್ದಾರೆ. ಮಹಿಳಾ ನಿರೂಪಕಿಗೆ ನೀಡಿದ ದೂರಿನ ಆಧಾರದ ಮೇಲೆ ಕೇರಳ ಪೊಲೀಸರು ನಟನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸೋಮವಾರ ಆತನನ್ನು ಪೊಲೀಸರ ಮುಂದೆ ಹಾಜರಾದಾಗ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. 

ಶ್ರೀನಾಥ್ ಮಾದಕ ದ್ರವ್ಯ ಸೇವಿಸಿದ್ದಾರಾ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಅವರ ಕೂದಲು, ಉಗುರು ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಘಟನೆಯ ದೂರುದಾರರಿಂದ ವಿಡಿಯೋ ಸಾಕ್ಷ್ಯವನ್ನು ಸಹ ಪೊಲೀಸರು ಕೇಳಿದ್ದಾರೆ. 

ಸಂದರ್ಶನದ ವೇಳೆ ನಿರೂಪಕರ ಪ್ರಶ್ನೆಗಳು ತನಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಹೇಳಿದ ಶ್ರೀನಾಥ್ ಅವರು ತಮಗಾಗುವ ಕಿರಿಕಿರಿಯನ್ನು ವ್ಯಕ್ತಪಡಿಸುವಾಗ ಅವ್ಯಾಚ್ಯ ಪದಗಳನ್ನು ಬಳಸಿದ್ದರು, ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು ಪರ-ವಿರೋಧ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ದಾಖಲೆಗಳಲ್ಲಿಲ್ಲದ ಜಮೀನಿಗೆ ಪಾವತಿಸಿದ ಉತ್ತರ ಪ್ರದೇಶದ ಯಮುನಾ ಎಕ್ಸ್ ಪ್ರೆಸ್‍ವೇ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News