ಜಮ್ಮು-ಕಾಶ್ಮೀರ: 8 ಗಂಟೆಗಳಲ್ಲಿ ಎರಡು ಬಸ್ ಸ್ಫೋಟ, ಇಬ್ಬರಿಗೆ ಗಾಯ

Update: 2022-09-29 05:14 GMT
ಸಾಂದರ್ಭಿಕ ಚಿತ್ರ, Photo: NDTV

ಉಧಂಪುರ(ಜಮ್ಮು): ಜಮ್ಮು ಮತ್ತು ಕಾಶ್ಮೀರದ ಉಧಂಪುರ ನಗರದ ಸ್ಟ್ಯಾಂಡ್‌ನಲ್ಲಿ ನಿಂತಿದ್ದ ಬಸ್‌ನಲ್ಲಿ ಗುರುವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ.  ಜಿಲ್ಲೆಯಲ್ಲಿ ಕಳೆದ 8 ಗಂಟೆಗಳಲ್ಲಿ ಸಂಭವಿಸಿದ ಎರಡನೇ ಸ್ಫೋಟ ಇದಾಗಿದೆ.

ಗುರುವಾರ ಮುಂಜಾನೆ 5.30 ರ ಸುಮಾರಿಗೆ ಸಂಭವಿಸಿದ ಸ್ಫೋಟದಿಂದ ಬಸ್‌ನ ಮೇಲ್ಛಾವಣಿ ಹಾಗೂ ಹಿಂಭಾಗವು ಹಾರಿಹೋಗಿದೆ.  ಆದರೆ ಯಾರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 4 ರಿಂದ ಆರಂಭವಾಗುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ಕೆಲವೇ ದಿನಗಳ ಮೊದಲು ಈ ಘಟನೆಗಳು ಸಂಭವಿಸಿವೆ. ಶಾ ಅವರು ಸೆಪ್ಟೆಂಬರ್ 30 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನಗಳ ಭೇಟಿಯನ್ನು ಕೈಗೊಳ್ಳಬೇಕಿತ್ತು ಮತ್ತು ಅಕ್ಟೋಬರ್ 1 ರಂದು ರಾಜೌರಿ ಹಾಗೂ  ಅಕ್ಟೋಬರ್‌ 2 ರಂದು  ಬಾರಾಮುಲ್ಲಾದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಬೇಕಿತ್ತು. ಆದಾಗ್ಯೂ, ಈ ಭೇಟಿಯನ್ನು ಮರುಹೊಂದಿಸಲಾಯಿತು.

ಬುಧವಾರ ರಾತ್ರಿ, ಡೊಮೈಲ್ ಚೌಕ್‌ನ ಪೆಟ್ರೋಲ್ ಪಂಪ್‌ನ ಬಳಿ ನಿಲ್ಲಿಸಲಾಗಿದ್ದ ಖಾಲಿ ಬಸ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ, ಬಸ್ ಅನ್ನು ಪ್ರತಿದಿನ ಸ್ಥಳದಲ್ಲಿ ನಿಲ್ಲಿಸಲಾಗುತ್ತಿತ್ತು.

ಎರಡನೇ ಸ್ಫೋಟ ಸಂಭವಿಸಿದ ಬಸ್ ಉಧಂಪುರ ಜಿಲ್ಲೆಯ ಬಸಂತ್‌ಗಢದಿಂದ ಬಂದಿದ್ದು, ರಾತ್ರಿ ಬಸ್ ನಿಲ್ದಾಣದಲ್ಲಿ ನಿಂತಿತ್ತು. ಬೆಳಗ್ಗೆ ಬಸಂತಗಢಕ್ಕೆ ಹೊರಡಬೇಕಾಗಿತ್ತು.

ಸ್ಫೋಟದಲ್ಲಿ ಎರಡರಿಂದ ಮೂರು ಬಸ್‌ಗಳು ಹಾನಿಗೊಳಗಾಗಿವೆ ಎಂದು ಉಧಂಪುರ-ರಿಯಾಸಿ ವ್ಯಾಪ್ತಿಯ ಡಿಐಜಿ ಸುಲೇಮಾನ್ ಚೌಧರಿ ಹೇಳಿದ್ದಾರೆ. "ಸ್ಫೋಟಕಗಳ ಸ್ವರೂಪ ಮತ್ತು ಇತರ ವಿಷಯಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇದಕ್ಕೆ ವಿವರವಾದ ತನಿಖೆ ಅಗತ್ಯವಿದೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News