ಜ್ಞಾನವಾಪಿ ಮಸೀದಿ ಪ್ರಕರಣ: ಎಎಸ್‌ಐ ಸಮೀಕ್ಷೆ ತಡೆಯನ್ನು ಅ. 31ರ ವರೆಗೆ ವಿಸ್ತರಿಸಿದ ಅಲಹಾಬಾದ್ ಹೈಕೋರ್ಟ್

Update: 2022-09-29 17:30 GMT

ಅಲಹಾಬಾದ್, ಸೆ. 29: ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ಆದೇಶಿಸಿ ವಾರಣಾಸಿ ನ್ಯಾಯಾಲಯ ನೀಡಿದ ಆದೇಶಕ್ಕೆ ನೀಡಿದ ತಡೆಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯ ಬುಧವಾರ ಅಕ್ಟೋಬರ್ 31ರ ವರೆಗೆ ವಿಸ್ತರಿಸಿದೆ. ನ್ಯಾಯಮೂರ್ತಿ ಪ್ರಕಾಶ್ ಪಾಡಿಯಾ ಅವರ ಪೀಠ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 18ಕ್ಕೆ ಪಟ್ಟಿ ಮಾಡಿತು.

ಮಸೀದಿ ನಿರ್ಮಾಣ ಮಾಡಲು 2,000 ವರ್ಷ ಹಳೆಯ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಮೊಗಲ್ ದೊರೆ ಔರಂಗಜೇಬ್ 1664ರಲ್ಲಿ ನೆಲಸಮಗೊಳಿಸಿದ್ದಾನೆ  ಎಂದು ಪ್ರತಿಪಾದಿಸಿ ವಿ.ಎಸ್. ರಸ್ತೋಗಿ ಎಂಬವರು  ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದ ಪ್ರಕರಣ ಇದು. 
ಮಸೀದಿಯಲ್ಲಿ ಹಿಂದೂ ದೇವತೆಯಾದ ಶೃಂಗಾರ ಗೌರಿಯ ಮೂರ್ತಿ ಇದೆ ಎಂದು ಪ್ರತಿಪಾದಿಸಿ ಹಾಗೂ ಅಲ್ಲಿ ದಿನಂಪ್ರತಿ ಪ್ರಾರ್ಥಿಸಲು ಅನುಮತಿ ನೀಡುವಂತೆ ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿದ ಮನವಿಯ ಹೊರತಾದ ಅರ್ಜಿ ಇದು.  ಜ್ಞಾನವಾಪಿ ಮಸೀದಿ ನಿರ್ಮಾಣ ಮಾಡಲಾದ ಭೂಮಿಯನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಬೇಕು ಎಂದು ರಸ್ತೋಗಿ ಅವರು ತನ್ನ  ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.

ದೇವಾಲಯದ ಮುಖ್ಯ ದೇವರು ವಿಶ್ವೇಶ್ವರನ ಪರವಾಗಿ ಸಲ್ಲಿಸಲಾದ ಇನ್ನೊಂದು ಅರ್ಜಿಯಲ್ಲಿ ರಸ್ತೋಗಿ, ಮಸೀದಿಯ ಸಮೀಕ್ಷೆ ನಡೆಸಲು  ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶಿಸುವಂತೆ ಕೋರಿದ್ದಾರೆ.  ಧಾರ್ಮಿಕ ಸ್ಥಿತಿಗತಿ ಅಥವಾ ಆವರಣದ ಲಕ್ಷಣಗಳನ್ನು ನಿರ್ಧರಿಸಲು ಸಂಪೂರ್ಣ ಜ್ಞಾನವಾಪಿ ಆವರಣದ ಪುರಾವೆಗಳನ್ನು ಸಂಗ್ರಹಿಸುವಂತೆ  ವಾರಣಾಸಿಯ ಪ್ರಥಮ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಕೆಳ ನ್ಯಾಯಾಲಯಕ್ಕೆ 1998ರಲ್ಲಿ ಆದೇಶಿಸಿದ್ದರು ಎಂದು ಅವರು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News