ಕಾಂಡೋಮ್‌ಗಳೂ ಬೇಕೇ? ಎಂದು ವಿದ್ಯಾರ್ಥಿನಿಗೆ ಕುಹಕವಾಡಿದ್ದ ಬಿಹಾರ ಅಧಿಕಾರಿಯಿಂದ ಕ್ಷಮೆಯಾಚನೆ

Update: 2022-09-29 17:38 GMT

ಹೊಸದಿಲ್ಲಿ,ಸೆ.29: ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ಪ್ರಶ್ನಿಸಿದ್ದ ಶಾಲಾ ಬಾಲಕಿಗೆ ‘ನೀನು ಕಾಂಡೋಮ್‌ಗಳನ್ನೂ ಬಯಸಬಹುದು ’ಎಂದು ಕುಹಕವಾಡಿದ್ದ ಬಿಹಾರದ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಾಮ್ರಾ ಅವರು ತನ್ನ ಹೇಳಿಕೆಗಾಗಿ ಕ್ಷಮೆ ಯಾಚಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವು ನೋಟಿಸ್ ಕಳುಹಿಸಿದ ಮತ್ತು ಮುಖ್ಯಮಂತ್ರಿಗಳು ವಿಚಾರಣೆಗೆ ಆದೇಶಿಸಿದ ಬಳಿಕ ಈ ಮಹಿಳಾ ಅಧಿಕಾರಿಯ ಕ್ಷಮೆಯಾಚನೆ ಹೊರಬಿದ್ದಿದೆ.

ತನ್ನ ನೋಟಿಸ್‌ಗೆ ಏಳು ದಿನಗಳಲ್ಲಿ ಉತ್ತರಿಸುವಂತೆ ಮಹಿಳಾ ಆಯೋಗವು ಬಿಹಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಆಡಳಿತ ನಿರ್ದೇಶಕಿ ಭಾಮ್ರಾರಿಗೆ ಗುರುವಾರ ಬೆಳಿಗ್ಗೆ ನಿರ್ದೇಶನ ನೀಡಿತ್ತು. ಸುದ್ದಿಗಾರರ ಪ್ರಶ್ನೆಗುತ್ತರಿಸಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ, ತಾನು ವರದಿಗಳನ್ನು ನೋಡಿದ್ದು,ವಿಚಾರಣೆಗೆ ಆದೇಶಿಸಿದ್ದೇನೆ, ಅಧಿಕಾರಿ ತಪ್ಪು ಮಾಡಿದ್ದರೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದರು.

ಮಂಗಳವಾರ ನಡೆದಿದ್ದ ಕಾರ್ಯಕ್ರಮದ ‘ತಪ್ಪು ವರದಿ’ಯನ್ನು ಮಾಡಿದ್ದಕ್ಕಾಗಿ ದೈನಿಕವೊಂದರ ವಿರುದ್ಧ ಮೊಕದ್ದಮೆಯನ್ನು ದಾಖಲಿಸುವುದಾಗಿ ಬುಧವಾರ ಬೆದರಿಕೆಯೊಡ್ಡಿದ್ದ ಭಾಮ್ರಾ, ವಿಷಾದವನ್ನು ವ್ಯಕ್ತಪಡಿಸಿ ಗುರುವಾರ ನೀಡಿರುವ ಹೇಳಿಕೆಯಲ್ಲಿ,ಹೆಚ್ಚಾಗಿ ಪುರುಷ ಪ್ರಧಾನ ಸಮಾಜದ ಸಂಕೋಲೆಯಲ್ಲಿರುವ ಬಾಲಕಿಯರಿಗೆ ಸ್ಫೂರ್ತಿ ನೀಡುವುದು ತನ್ನ ಮಾತಿನ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ. 

‘ಸ್ವಾವಲಂಬಿಗಳಾಗುವಂತೆ ಬಾಲಕಿಯರನ್ನು ಆಗ್ರಹಿಸುವುದು ನನ್ನ ಮಾತಿನ ಅರ್ಥವಾಗಿತ್ತು. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಯಾರಿಗೂ ನೋವು ಅಥವಾ ಅವಮಾನವನ್ನುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ ’ಎಂದಿದ್ದಾರೆ.

ಮಂಗಳವಾರದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಬಾಲಕಿಯು, ಸರಕಾರವು ಈಗಾಗಲೇ ಸಮವಸ್ತ್ರಗಳು ಮತ್ತು ವಿದ್ಯಾರ್ಥಿ ವೇತನಗಳನ್ನು ನೀಡುತ್ತಿದೆ,ಹೀಗಾಗಿ ಅದು 20-30 ರೂ.ಗಳಿಗೆ ಸ್ಯಾನಿಟರಿ  ನೀಡಬಹುದಾಗಿದೆ ಎಂದು ಹೇಳಿದ್ದಳು.ಇದಕ್ಕೆ ಪ್ರತಿಕ್ರಿಯಿಸಿದ್ದ ಭಾಮ್ರಾ,ಸರಕಾರವು ಜೀನ್ಸ್ ನೀಡಬೇಕೆಂದು ನೀನು ನಾಳೆ ಹೇಳಬಹುದು. ಅದರ ಬಳಿಕ ಸುಂದರವಾದ ಶೂಗಳೂ ಬೇಕಾಗಬಹುದು. ಅಂತಿಮವಾಗಿ ಸರಕಾರವು ಕುಟುಂಬ ಯೊಜನೆ ಸಾಧನಗಳನ್ನು,ಕಾಂಡೋಮ್ಗಳನ್ನೂ ನೀಡಬೇಕೆಂದು ನೀನು ನಿರೀಕ್ಷಿಸಬಹುದು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News