ಅಂತರ್‌ರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ತೆರೆ ಎಳೆದ ಜೂಲನ್ ಗೋಸ್ವಾಮಿ

Update: 2022-09-30 05:49 GMT

ಭಾರತದ ಮಹಿಳಾ ಕ್ರಿಕೆಟ್‌ನ ಲೆಜೆಂಡರಿ ವೇಗದ ಬೌಲರ್, ಮಾಜಿ ನಾಯಕಿ ಜೂಲನ್ ನಿಶಿತ್ ಗೋಸ್ವಾಮಿ ಅವರು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದ ಜೂಲನ್ ಅದೇ ತಂಡದ ವಿರುದ್ಧ ತನ್ನ ವೃತ್ತಿ ಜೀವನವನ್ನು ಕೊನೆಗೊಳಿಸಿರುವುದು ವಿಶೇಷ.

39ರ ಹರೆಯದ ಜೂಲನ್ 20 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ವಿಶೇಷ ರೀತಿಯಲ್ಲಿ ಗಮನ ಸೆಳೆದವರು. ಇತ್ತೀಚೆಗೆ ನಿವೃತ್ತರಾದ ಮಾಜಿ ನಾಯಕಿ ಮಿಥಾಲಿರಾಜ್ ಅವರಿಗೆ ತನ್ನ ಸುದೀರ್ಘ ಯಾನದಲ್ಲಿ ವಿಶ್ವಕಪ್ ಎತ್ತಲು ಸಾಧ್ಯವಾಗಲಿಲ್ಲ ಎಂಬ ನೋವು ಇತ್ತು. ಅವರ ತಂಡದಲ್ಲಿದ್ದ ಜೂಲನ್ ಕೂಡಾ ನಿರ್ಗಮಿಸುವಾಗ ಅದೇ ಭಾವನೆ ವ್ಯಕ್ತಪಡಿಸಿದ್ದಾರೆ. ‘‘ನಾನು ಎರಡು ವಿಶ್ವಕಪ್ ಫೈನಲ್‌ಗಳಲ್ಲಿ ಆಡಿದ್ದೇನೆ, ನಾವು ಅವುಗಳಲ್ಲಿ ಒಂದನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ. ಅದು ನನ್ನ ವೃತ್ತಿ ಬದುಕಿನ ದೊಡ್ಡ ಕನಸಾಗಿತ್ತು. ಆ ನೋವು ನನಗೆ ಇದೆ. ಅದು ಬಿಟ್ಟರೆ ಕ್ರಿಕೆಟ್ ಬದುಕಿನ ಉಳಿದೆಲ್ಲವೂ ಅದ್ಭುತವಾಗಿತ್ತು’’ ಎಂದು ಜೂಲನ್ ವಿದಾಯದ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಭಾರತವು 2005 ಮತ್ತು 2017ರ ಮಹಿಳಾ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಕ್ರಮವಾಗಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ವಿರುದ್ಧ ಸೋತು ಪ್ರಶಸ್ತಿ ವಂಚಿತಗೊಂಡಿತ್ತು. ಆದರೆ 2022ರ ಆವೃತ್ತಿಯಲ್ಲಿ ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು. 2002, ಜ.4ರಂದು ಚೆನ್ನೈನಲ್ಲಿ ಆಡಿದ ಚೊಚ್ಚಲ ಏಕದಿನ ಪಂದ್ಯದಲ್ಲಿ ಜೂಲನ್ 7 ಓವರ್‌ಗಳಲ್ಲಿ 12 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಅಂಜುಮ್ ಚೋಪ್ರಾ ನಾಯಕತ್ವದ ಭಾರತದ ತಂಡ ಆ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತ್ತು. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ತನ್ನ ಕೊನೆಯ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಜೂಲನ್ ಬ್ಯಾಟಿಂಗ್‌ಗೆ ಇಳಿದರೂ ರನ್ ಗಳಿಸಲು ಸಾಧ್ಯವಾಗದೆ ಸೊನ್ನೆ ಸುತ್ತಿದರು. ಆದರೆ ಬೌಲಿಂಗ್‌ನಲ್ಲಿ 2 ವಿಕೆಟ್(10-3-30-2) ಪಡೆಯುವ ಮೂಲಕ ವಿದಾಯ ಪಂದ್ಯವನ್ನು ಸ್ಮರಣೀಯವನ್ನಾಗಿಸಿದರು. ಅಲ್ಲದೆ ಈ ಪಂದ್ಯ ಭಾರತದ ಪಾಲಿಗೂ ಐತಿಹಾಸಿಕ ಎನಿಸಿಕೊಂಡಿದೆ. ಭಾರತ 3-0 ಅಂತರದಲ್ಲಿ ಸರಣಿ ಜಯಿಸುವ ಮೂಲಕ ಆಂಗ್ಲರ ನೆಲದಲ್ಲಿ ಅಪೂರ್ವ ಸಾಧನೆ ಮಾಡಿದೆ. ಸರಣಿಯ ಮೂರನೇ ಪಂದ್ಯದಲ್ಲಿ ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಇಂಗ್ಲೆಂಡ್‌ನ ಪರ ಚೆನ್ನಾಗಿ ಆಡುತ್ತಿದ್ದ ಆಟಗಾರ್ತಿ ಚಾರ್ಲಿ ಡೀನ್ ಅವರನ್ನು ರನೌಟ್ ಮಾಡುವುದರೊಂದಿಗೆ ಇಂಗ್ಲೆಂಡ್ ಆಲೌಟಾಗಿ ಭಾರತಕ್ಕೆ 16 ರನ್‌ಗಳ ಗೆಲುವು ತಂದು ಕೊಟ್ಟರು. ಇದೇ ಕ್ರೀಡಾಂಗಣದಲ್ಲಿ ಭಾರತ 2017, ಜುಲೈ 23ರಂದು ನಡೆದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್‌ಗಳ ಸೋಲು ಅನುಭವಿಸಿ ವಿಶ್ವಚಾಂಪಿಯನ್ ಪಟ್ಟಕ್ಕೇರುವ ಅವಕಾಶವನ್ನು ಕೈ ಚೆಲ್ಲಿತ್ತು. ದೀಪ್ತಿ ಶರ್ಮಾ ಅವರು ಡೀನ್‌ರನ್ನು ರನೌಟ್ ಮಾಡಿರುವ ವಿಧಾನದ ಬಗ್ಗೆ ಪರ ವಿರೋಧ ಹೇಳಿಕೆಗಳು ಎಲ್ಲ್ಲೆಡೆ ಕೇಳಿಬರುತ್ತಿವೆ. ಬೌಲಿಂಗ್ ಮಾಡುವ ಹೊತ್ತಿಗೆ ನಾನ್ ಸ್ಟ್ರೈಕರ್‌ನಲ್ಲಿದ್ದ ಡೀನ್ ಕ್ರೀಸ್ ತೊರೆದು ಓಟಕ್ಕೆ ಅಣಿಯಾಗುತ್ತಿದ್ದ ವಿಚಾರದಲ್ಲಿ ದೀಪ್ತಿ ಎಚ್ಚರಿಕೆ ನೀಡಿದ್ದರು. ಆದರೆ ಆಕೆ ತನ್ನ ಚಾಳಿಯನ್ನು ಮತ್ತೆ ಮತ್ತೆ ಮುಂದುವರಿಸಿದಾಗ, ದೀಪ್ತಿ ಮಂಕಡ್ ಅಸ್ತ್ರದ ಮೂಲಕ ಆಕೆಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್‌ನ ಆಟಗಾರರಿಗೆ ಆಘಾತ ನೀಡಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಹಿರಿಯ ಆಟಗಾರ್ತಿ ಜೂಲನ್‌ಗೆ ಗೆಲುವಿನೊಂದಿಗೆ ಕ್ರಿಕೆಟ್ ಬದುಕಿನಿಂದ ನಿರ್ಗಮಿಸಲು ನೆರವಾಗಿದ್ದಾರೆ. 1947ರಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಟೆಸ್ಟ್ ಪಂದ್ಯಲ್ಲಿ ಭಾರತದ ವಿನೂ ಮಂಕಡ್ ಅವರು ಆಸ್ಟ್ರೇಲಿಯದ ಆಟಗಾರನನ್ನು ರನೌಟ್ ಮಾಡಿದ ವಿಧಾನ ಮಂಕಡಿಂಗ್ ಆಗಿ ಪ್ರಸಿದ್ಧಿ ಪಡೆಯಿತು. ಆಲ್-ರೌಂಡರ್ ವಿನೂ ಮಂಕಡ್ ಅವರು ಬಿಲ್ಲಿ ಬ್ರೌನ್ ಅವರನ್ನು ರನೌಟ್ ಮಾಡಿದ ವಿಧಾನವನ್ನು ವಿವರಿಸಲು ‘ಮಂಕಡಿಂಗ್’ ಪದವನ್ನು ಬಳಸಲಾಯಿತು.

ದೀಪ್ತಿ ಅವರಂತೆ ಮಂಕಡ್ ರನೌಟ್ ಮಾಡಿದ ವಿಚಾರ ದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿ ದ್ದರು. ಆಗ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರ ಬೆಂಬಲಕ್ಕೆ ಬಂದಿದ್ದರು. ಆಗ ಬ್ರಾಡ್ಮನ್ ಆಸ್ಟ್ರೇಲಿಯ ತಂಡದ ನಾಯಕರಾಗಿದ್ದರು. ಮಂಕಡ್ ಅವರ ರನೌಟ್ ಮಾಡಿದ ವಿಧಾನವನ್ನು ಸಮರ್ಥಿಸಿಕೊಂಡಿದ್ದರು. ಇದೀಗ 75 ವರ್ಷಗಳ ಬಳಿಕ ದೀಪ್ತಿ ಅವರು ಮಂಕಡ್ ವಿಧಾನವನ್ನು ಅನುಸರಿಸಿ ಕ್ರಿಕೆಟ್ ಜನಕರಿಗೆ ಕ್ರಿಕೆಟ್ ನಿಯಮವನ್ನು ನೆನಪಿಸಿಕೊಟ್ಟಿದ್ದಾರೆ. ಎರಡು ದಶಕಗಳ ಕ್ರಿಕೆಟ್ ಬದುಕು:

ಜೂಲನ್ ಸಾರ್ವಕಾಲಿಕ ವೇಗದ ಶ್ರೇಷ್ಠ ಮಹಿಳಾ ಬೌಲರ್ ಆಗಿದ್ದಾರೆ. ವಿಶ್ವದ ಮಹಿಳಾ ಕ್ರಿಕೆಟ್‌ನಲ್ಲಿ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಜೂಲನ್ 12 ಟೆಸ್ಟ್, 204 ಏಕದಿನ ಮತ್ತು 68 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 355 ವಿಕೆಟ್ ಗಳಿಸುವ ಮೂಲಕ ಮಹಿಳಾ ವಿಶ್ವ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. 25 ನವೆಂಬರ್ 1982ರಂದು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಚಕ್ದಾಹಾ ಪಟ್ಟಣದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಜೂಲನ್ ಬಾಲ್ಯದಲ್ಲಿ ಫುಟ್ಬಾಲ್‌ನತ್ತ ಒಲವು ಹೊಂದಿದ್ದರು. 15ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಇಳಿದರು. 1997ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವೆ ತನ್ನ ತವರು ಕ್ರೀಡಾಂಗಣ ಕೋಲ್ಕತಾ ಈಡನ್ ಗಾರ್ಡನ್‌ನಲ್ಲಿ ನಡೆದಾಗ ತಾನು ಬಾಲ್ ಗರ್ಲ್ ಆಗಿ ಬರಬಹುದೇ ಎಂದು ಸ್ವಯಂ ಸೇವಕರಲ್ಲಿ ಜೂಲನ್ ಕೇಳಿದ್ದರು. ಪಂದ್ಯದಲ್ಲಿ ಅವರು ಆಸ್ಟ್ರೇಲಿಯದ ಬ್ಯಾಟರ್ ಬೆಲಿಂಡಾ ಕ್ಲಾರ್ಕ್ ಆಟದಿಂದ ಪ್ರಭಾವಿತರಾಗಿದ್ದರು. ಜೂಲನ್ ಕ್ರಿಕೆಟ್ ತರಬೇತಿಗೆ ದಿನವೂ ಕೋಲ್ಕತಾಕ್ಕೆ ಬರುತ್ತಿದ್ದರು. ಬೆಳಗ್ಗೆ 4 ಗಂಟೆಗೆ ಎದ್ದು ರೈಲಿನಲ್ಲಿ 90 ಕಿ.ಮೀ. ಪ್ರಯಾಣದ ಮೂಲಕ ತರಬೇತಿಗೆ ಹಾಜರಾಗುತ್ತಿದ್ದರು. ಕೆಲವೊಮ್ಮೆ ಅವರು ತರಬೇತಿಗೆ ಹಾಜರಾಗುವಷ್ಟರ ವೇಳೆಗೆ ತರಬೇತಿ ಮುಗಿಯುತ್ತಿತ್ತು. 2002ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಜೂಲನ್ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದರು. ಆಗ ಅವರಿಗೆ 19 ವರ್ಷವಾಗಿತ್ತು. 14 ಜನವರಿ 2002ರಂದು ಇಂಗ್ಲೆಂಡ್ ವಿರುದ್ಧ ಲಕ್ನೋದಲ್ಲಿ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದರು. ಜೂಲನ್ ಅವರು ಮಿಥಾಲಿ ರಾಜ್ ಅವರೊಂದಿಗೆ 2006ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಟೆಸ್ಟ್ ಸರಣಿ ಗೆಲ್ಲಲು ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ದೊಡ್ಡ ಕೊಡುಗೆ ನೀಡಿದರು. ಲೀಸೆಸ್ಟರ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನೈಟ್‌ವಾಚ್‌ಮೆನ್ ಆಗಿ ಅರ್ಧಶತಕವನ್ನು ಗಳಿಸಿದರು ಮತ್ತು ಟೌನ್‌ಟನ್‌ನಲ್ಲಿ ಎರಡನೇ ಟೆಸ್ಟ್‌ನಲ್ಲಿ 78ಕ್ಕೆ 10 ವಿಕೆಟ್ ಪಡೆದು ಭಾರತದ ಗೆಲುವಿಗೆ ನೆರವಾಗಿದ್ದರು.

ಜೂಲನ್ 2008ರಿಂದ 2011ರವರೆಗೆ ಭಾರತ ತಂಡದ ನಾಯಕಿಯಾಗಿದ್ದರು.

ಜೂಲನ್ ಈ ವರೆಗೆ 204 ಏಕದಿನ ಪಂದ್ಯಗಳಲ್ಲಿ ಆಡಿ 255, 12 ಟೆಸ್ಟ್‌ಗಳಲ್ಲಿ 44 ಮತ್ತು 68 ಟ್ವೆಂಟಿ-20 ಪಂದ್ಯಗಳಲ್ಲಿ 56 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಗಾಯದ ಸಮಸ್ಯೆಯಿಂದಾಗಿ ಜೂಲನ್ ಬಳಲಿದ್ದರು.

ಎರಡು ದಶಕಗಳ ಕ್ರಿಕೆಟ್ ಪ್ರಯಾಣದಲ್ಲಿ ವಿಶ್ವಕಪ್ ಎತ್ತಲು ಸಾಧ್ಯವಾಗದಿದ್ದರೂ, ಐದು ವಿಶ್ವಕಪ್‌ಗಳಲ್ಲಿ (2005, 2009, 2013, 2017 ಮತ್ತು 2022) ಆಡಿ ಗರಿಷ್ಠ ವಿಕೆಟ್ ಪಡೆದ ಮಹಿಳಾ ಬೌಲರ್ ಆಗಿ ದಾಖಲೆ ಬರೆದಿದ್ದಾರೆ.

 ಜೂಲನ್ ಕಳೆದ ಜೂನ್‌ನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಮಾಜಿ ನಾಯಕಿ ಮಿಥಾಲಿ ರಾಜ್ ಅವರೊಂದಿಗೆ ಬಿಸಿಸಿಐನ ಕನಸಿನ ಮಹಿಳಾ ಐಪಿಎಲ್‌ನಲ್ಲಿ ಆಡುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ಇಬ್ರಾಹಿಂ ಅಡ್ಕಸ್ಥಳ

contributor

Editor - ಇಬ್ರಾಹಿಂ ಅಡ್ಕಸ್ಥಳ

contributor

Similar News