ಚುನಾವಣಾ ಪ್ರಣಾಳಿಕೆಯಲ್ಲಿ ಭೂಪಟ ಪ್ರಮಾದ: ಕ್ಷಮೆಯಾಚಿಸಿದ ಶಶಿ ತರೂರ್

Update: 2022-09-30 15:59 GMT

ಹೊಸದಿಲ್ಲಿ, ಸೆ.29: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿರುವ ಸಂಸದ ಶಶಿ ತರೂರ್ ಅವರು ಟ್ವಿಟ್ಟರ್ ನಲ್ಲಿ ಬಿಡುಗಡೆಗೊಳಿಸಿದ ತನ್ನ ಚುನಾವಣಾ ಪ್ರಣಾಳಿಕೆಯ ಜೊತೆಗೆ ಪ್ರಕಟಿಸಿದ್ದ ಭಾರತದ ನಕ್ಷೆಯಲ್ಲಿ ಜಮ್ಮುಕಾಶ್ಮೀರ ಹಾಗೂ ಲಡಾಖ್ ನ ಭಾಗಗಳನ್ನು ಕೈಬಿಟ್ಟಿರುವುದಕ್ಕಾಗಿ ಶುಕ್ರವಾರ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ವ್ಯಾಪಕ ವಿರೋಧ ವ್ಯಕ್ತವಾದ ಆನಂತರ ಅವರು ಭಾರತದ ನಕಾಶೆಯ ಸರಿಪಡಿಸಲಾದ ಆವೃತ್ತಿಯನ್ನು ಪ್ರಕಟಿಸಿದ್ದಾರೆ. ಟ್ವಿಟ್ಟರ್ನಲ್ಲಿ ತರೂರ್ ಗೆ 80 ಲಕ್ಷಕ್ಕೂ ಫಾಲೋವರ್ ಗಳಿದ್ದಾರೆ.

ಆದರೆ ತರೂರ್ ಅವರು ಈ ‘ಅತಿರೇಕದ ಪ್ರಮಾದ’ದಿಂದ ತಾನು ಅಂತರವನ್ನು ಕಾಯ್ದುಕೊಂಡಿರುವುದಾಗಿ ಕಾಂಗ್ರೆಸ್ ಪಕ್ಷವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಭೂಪಟ ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿರುವ ಶಶಿ ತರೂರ್ ಅವರು ‘ಯಾರೂ ಕೂಡಾ ಇಂತಹ ತಪ್ಪುಗಳನ್ನು ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ತನ್ನ ಚುನಾವಣಾ ತಂಡವು ಈ ತಪ್ಪನ್ನು ಮಾಡಿದ್ದು, ಅದನ್ನು ತಕ್ಷಣವೇ ಸರಿಪಡಿಸಲಾಗಿದೆ ಮತ್ತು ಇದಕ್ಕಾಗಿ ತಾನು ನಿಶ್ಶರ್ತವಾಗಿ ಕ್ಷಮೆ ಯಾಚಿಸುತ್ತೇನೆ’’ ಎಂದವರು ಹೇಳಿದ್ದಾರೆ.

ಶಶಿ ತರೂರ್ ಅವರ ಪ್ರಣಾಳಿಕೆಯೊಂದಿಗೆ ಪ್ರಕಟಿಸಲಾದ ಭಾರತದ ತಪ್ಪು ಭೂಪಟವು, ‘‘ಒಂದು ದೊಡ್ಡ ಅವಿವೇಕತನವಾಗಿದೆ ಹಾಗೂ ನಾಚಿಕೆಗೇಡಿನ ಕೃತ್ಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಕೆಲವು ಬಳಕೆದಾರರು, ತರೂರ್ ಅವರು ವಿಭಜನವಾದಿ ಕಾರ್ಯಸೂಚಿಯನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ

ಈ ಬಗ್ಗೆ ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ವರಿಷ್ಠ ಜೈರಾಮ್ ರಮೇಶ್ ಅವರು, ಬಿಜೆಪಿಯು ತನಗೆ ದೊರೆಯುವ ಯಾವುದೇ ದುರ್ಬಲ ಕಾರಣವನ್ನು ಬಳಸಿಕೊಂಡು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

ಥರೂರ್ ಕ್ಷಮಾಯಾಚನೆಗೆ ಪ್ರತಿಕ್ರಿಯೆಯಾಗಿ ಟ್ವಿಟ್ಟರ್ ಬಳಕೆದಾರರೊಬ್ಬರು, ‘‘ಚುನಾವಣಾ ಪ್ರಣಾಳಿಕೆಯಂತಹ ಮಹತ್ವದ ದಾಖಲೆಯನ್ನು ಅದರ ಬಿಡುಗಡೆಗೆ ಮುನ್ನವೇ ಪರಿಶೀಲಿಸಬೇಕೆಂದು ನೀವು ಯೋಚಿಸಲಿಲ್ಲವೇ. ಅದೂ ಕೂಡಾ 13 ಪುಟಗಳ ದಾಖಲೆಪತ್ರವನ್ನು’’ ಟ್ವಿಟ್ಟರ್ ಬಳಕೆದಾರರೊಬ್ಬರು ತಿಳಿಸಿದ್ದಾರೆ.

ಭೂಪಟ ವಿವಾದದಲ್ಲಿ ಶಶಿಥರೂರ್ ಸಿಲುಕಿರುವುದು ಕಳೆದ ಮೂರು ವರ್ಷಗಳಲ್ಲಿ ಇದು ಎರಡನೆ ಸಲವಾಗಿದೆ. 2019ರ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಕೇರಳದಲ್ಲಿ ಕಾಂಗ್ರೆಸ್ ಆಯೋಜಿಸಿದ ಪ್ರತಿಭಟನೆ ಕುರಿತಾಗಿ ತನ್ನ ಟ್ವಿಟ್ಟರ್ನಲ್ಲಿ ಪ್ರಸಾರ ಮಾಡಿದ್ದ ಪ್ರಚಾರಪತ್ರದಲ್ಲಿಯೂ ಭಾರತದ ಭೂಪಟವನ್ನು ತಪ್ಪಾಗಿ ಪ್ರಕಟಿಸಿದ್ದುದು ಭಾರೀ ವಿವಾದಕ್ಕೆ ಕಾರಣವಾಗಿತು. ಆನಂತರ ಅವರು ಟ್ವೀಟನ್ನು ಅಳಿಸಿಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News