ಟ್ವೆಂಟಿ-20 ಕ್ರಿಕೆಟ್: ವಿರಾಟ್ ಕೊಹ್ಲಿ ವಿಶ್ವ ದಾಖಲೆ ಸರಿಗಟ್ಟಿದ ಬಾಬರ್ ಆಝಂ

Update: 2022-10-01 06:18 GMT
Photo:PTI

ಕರಾಚಿ, ಅ.1:ಟ್ವೆಂಟಿ-20 ಕ್ರಿಕೆಟ್ ನಲ್ಲಿ ವೇಗವಾಗಿ 3,000 ರನ್ ಪೂರೈಸಿದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಂ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ ಶುಕ್ರವಾರ ನಡೆದ 6ನೇ  ಪಂದ್ಯದಲ್ಲಿ ಆಝಂ ಈ ಸಾಧನೆ ಮಾಡಿದರು.  27ರ ಹರೆಯದ ಆಝಂ ಆರನೇ ಟ್ವೆಂಟಿ-20 ಪಂದ್ಯದಲ್ಲಿ ಔಟಾಗದೆ 87 ರನ್(59 ಎಸೆತ, 7 ಬೌಂಡರಿ, 3 ಸಿಕ್ಸರ್)ಗಳಿಸಿದರು. ಆಝಂ ತನ್ನ 81ನೇ ಇನಿಂಗ್ಸ್ ನಲ್ಲಿ 3,000 ರನ್ ಪೂರೈಸಿದರು. ವಿಶೇಷವೆಂದರೆ ಕೊಹ್ಲಿ ಕೂಡ 3 ಸಾವಿರ ರನ್ ಪೂರೈಸಲು 81 ಇನಿಂಗ್ಸ್ ಗಳಲ್ಲಿ ಆಡಿದ್ದರು.

ಏಷ್ಯಾ ಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆಝಂ ವೇಗವಾಗಿ 3 ಸಾವಿರ ರನ್ ಪೂರೈಸುವ  ಪ್ರಕ್ರಿಯೆಯಲ್ಲಿ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್‌ರನ್ನು ಹಿಂದಿಕ್ಕಿದರು.  ರೋಹಿತ್ ಶರ್ಮಾ, ಕೊಹ್ಲಿ ಹಾಗೂ  ನ್ಯೂಝಿಲ್ಯಾಂಡ್ ನ ಮಾರ್ಟಿನ್ ಗಪ್ಟಿಲ್ ಬಳಿಕ ಟಿ-20 ಮಾದರಿಯಲ್ಲಿ  ಹೆಚ್ಚು ರನ್ ಗಳಿಸಿದ ವಿಶ್ವದ  ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.

ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಶುಕ್ರವಾರ ಬಾಬರ್ ಆಝಂ  ನೆರವಿನಿಂದ ಪಾಕಿಸ್ತಾನ 6 ವಿಕೆಟಿಗೆ 169 ರನ್ ಗಳಿಸಿತು. ಇಂಗ್ಲೆಂಡ್ 14.3 ಓವರ್ ಗಳಲ್ಲಿ ರನ್ ಚೇಸಿಂಗ್ ಮಾಡಿ ಗೆಲುವಿನ  ನಗೆ ಬೀರಿದೆ. ಸರಣಿಯನ್ನು 3-3ರಿಂದ ಸಮಬಲಗೊಳಿಸಿದೆ.

ಉಭಯ ತಂಡಗಳು ರವಿವಾರ ಲಾಹೋರ್‌ನಲ್ಲಿ ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News