ದಿಲ್ಲಿ: ಮೂವರು ಗೆಳೆಯರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 10 ವರ್ಷದ ಬಾಲಕ ಸಾವು

Update: 2022-10-01 17:18 GMT
Photo:PTI

ಹೊಸದಿಲ್ಲಿ, ಅ. 9: ಕಳೆದ ತಿಂಗಳು ಸೋದರ ಸಂಬಂಧಿ ಸಹಿತ ಮೂವರು ಗೆಳೆಯರಿಂದ ಲೈಂಗಿಕ ದೌರ್ಜನ್ಯ ಹಾಗೂ ಕ್ರೌರ್ಯಕ್ಕೆ ಒಳಗಾದ ದಿಲ್ಲಿಯ ೧೦ ವರ್ಷದ ಬಾಲಕ ಇಲ್ಲಿನ ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆ (ಎಲ್‌ಎನ್‌ಜೆಪಿ)ಯಲ್ಲಿ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾನೆ.

ಈ ಕೃತ್ಯದಲ್ಲಿ ಭಾಗಿಯಾದ ಎಲ್ಲ ಮಕ್ಕಳೂ ೧೦ ಹಾಗೂ ೧೨ ವಯಸ್ಸಿನ ನಡುವಿನವರು ಹಾಗೂ ಒಂದೇ ಸಮುದಾಯಕ್ಕೆ ಸೇರಿದವರು. ಈಶಾನ್ಯ ದಿಲ್ಲಿಯ ನ್ಯೂ ಸೀಲಾಮ್‌ಪುರ ಪ್ರದೇಶದ ನಿವಾಸಿಗಳು. ಮೂರು ದಿನಗಳ ಹಿಂದೆ ನಡೆದ ದೈಹಿಕ ಹಲ್ಲೆಯಿಂದ ಗಾಯಗೊಂಡಿದ್ದ ೧೦ ವರ್ಷದ ಬಾಲಕನನ್ನು ಇಲ್ಲಿ ದಾಖಲಿಸಲಾಗಿದೆ ಎಂದು ಎಲ್‌ಎನ್‌ಜೆಪಿ ಆಸ್ಪತ್ರೆಯಿಂದ ಸೀಲಾಮ್‌ಪುರ ಪೊಲೀಸ್ ಠಾಣೆಯ ಪೊಲೀಸರು ಸೆಪ್ಟಂಬರ್ ೨೨ರಂದು ಕರೆ ಸ್ವೀಕರಿಸಿದ್ದರು. ಪೊಲೀಸರ ತಂಡ ಆಸ್ಪತ್ರೆಗೆ ತೆರಳಿ ಬಾಲಕನ ಹೆತ್ತವರನ್ನು ಭೇಟಿಯಾಗಿದ್ದರು. ಆದರೆ, ಅವರು ಹೇಳಿಕೆ ನೀಡಲು ನಿರಾಕರಿಸಿದ್ದರು. ಆಗ ಬಾಲಕ ವೈದ್ಯಕೀಯ ನಿಗಾದಲ್ಲಿ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಮಹಿಳಾ ಆಯುಕ್ತರು (ಡಿಸಿಡಬ್ಲ್ಯು) ಕೂಡ ಪೊಲೀಸರಿಗೆ ನೋಟಿಸು ಜಾರಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ತನ್ನ ಮಗನ ಮೇಲೆ ಆತನ ಗೆಳೆಯರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಆತನ ಗುಪ್ತಾಂಗಕ್ಕೆ ಸರಳು ತೂರಿಸಿದ್ದಾರೆ ಎಂದು ಬಾಲಕನ ತಾಯಿಯ ದೂರನ್ನು ಸ್ವೀಕರಿಸಿರುವುದಾಗಿ ಡಿಸಿಡಬ್ಲ್ಯು ತಿಳಿಸಿದೆ.

ಘಟನೆ ನಡೆದು ನಾಲ್ಕು ದಿನಗಳ ಬಳಿಕ ಬಾಲಕನನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕುಟುಂಬ ಸೆಪ್ಟಂಬರ್ ೨೪ರ ವರೆಗೆ ಹೇಳಿಕೆ ನೀಡಿರಲಿಲ್ಲ. ಪೊಲೀಸರು ನಡೆಸಿದ ಸಮಾಲೋಚನೆಯಲ್ಲಿ ಬಾಲಕನ ತಾಯಿ, ಸಾಲವನ್ನು ಸರಿಯಾದ ಸಮಯಕ್ಕೆ ಹಿಂದಿರುಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತನ್ನ ಪುತ್ರನ ಮೇಲೆ ಆತನ ಮೂವರು ಗೆಳೆಯರು ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಈ ಹೇಳಿಕೆಯ ಆಧಾರದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೭ ಹಾಗೂ ೩೪ ಹಾಗೂ ಪೊಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕನ ಸೋದರ ಸಂಬಂಧಿಸಿ ಸೇರಿದಂತೆ ಹಲ್ಲೆ ನಡೆಸಿದ ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿದ್ದಾರೆ. ಇನ್ನೋರ್ವ ಬಾಲಕನನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News