ಎಥೆನಾಲ್ ಮಿಶ್ರಣ ರಹಿತ ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವುದನ್ನು ಮುಂದೂಡಿದ ಕೇಂದ್ರ ಸರಕಾರ

Update: 2022-10-01 08:24 GMT

ಹೊಸದಿಲ್ಲಿ: ಎಥೆನಾಲ್ ಮತ್ತು ಬಯೋ-ಡೀಸೆಲ್ ಸೇರಿಸದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ಲೀಟರ್ ರೂ. 2  ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವುದನ್ನು ಕೇಂದ್ರ ಸರಕಾರ ಒಂದು ತಿಂಗಳು ಮುಂದೂಡಿದೆ.  ಹೆಚ್ಚುವರಿ ಅಬಕಾರಿ ಸುಂಕವನ್ನು ನವೆಂಬರ್ 1, 2022 ರಿಂದ ಜಾರಿಗೊಳಿಸಲಾಗುವುದು ಎಂದು ವಿತ್ತ ಸಚಿವಾಲಯ ಬಿಡುಗಡೆಗೊಳಿಸಿದ ಗಜೆಟ್ ಅಧಿಸೂಚನೆ ತಿಳಿಸುತ್ತದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಈ ವರ್ಷದ ಬಜೆಟ್ ಭಾಷಣದಲ್ಲಿ ಎಥೆನಾಲ್ ಮತ್ತು ಬಯೋಡೀಸಿಲ್ ಮಿಶ್ರಣ ಮಾಡದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರೂ 2 ಹೆಚ್ಚುವರಿ ಅಬಕಾರಿ ಸುಂಕ  ವಿಧಿಸುವ ಪ್ರಸ್ತಾವನೆ ಮಾಡಿದ್ದರು. ಈ ನಿಯಮ ಅಕ್ಟೋಬರ್ 1, 2022 ರಂದು, ಅಂದರೆ ಇಂದು ಜಾರಿಯಾಗಬೇಕಿದ್ದರೂ ಒಂದು ತಿಂಗಳು ಮುಂದೂಡಲ್ಪಟ್ಟ ಕಾರಣ ನವೆಂಬರ್ 1 ರಂದು ಜಾರಿಗೊಳ್ಳಲಿದೆ.

ಪ್ರಸ್ತುತ ಕಬ್ಬು ಅಥವಾ ಹೆಚ್ಚುವರಿ ಆಹಾರ ಧಾನ್ಯದಿಂದ ಹೊರತೆಗೆಯಲಾದ ಎಥೆನಾಲ್ ಅನ್ನು ಪೆಟ್ರೋಲ್‍ನಲ್ಲಿ ಶೇ 10 ರಷ್ಟು ಮಿಶ್ರಣ ಮಾಡಲಾಗುತ್ತಿದೆ, ಅಂದರೆ ಶೇ 90 ಪೆಟ್ರೋಲ್ ಮತ್ತು ಶೇ 10 ಎಥೆನಾಲ್ ಇರುತ್ತದೆ. ತೈಲ ಆಮದು ಮೇಲಿನ ಅವಲಂಬನೆ ಮತ್ತು ರೈತರಿಗೆ ಹೆಚ್ಚುವರಿ ಆದಾಯ ಮೂಲ ಒದಗಿಸುವ ಉದ್ದೇಶದಿಂದ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ.

ಆದರೆ ದೇಶದಲ್ಲಿ ಅತ್ಯಧಿಕ ಬಳಕೆಯಾಗುವ ಇಂಧನವಾದ ಡೀಸೆಲ್‍ನಲ್ಲಿ ಈ ರೀತಿಯ ಮಿಶ್ರಣವನ್ನು ಪ್ರಾಯೋಗಿಕವಾಗಿ ಮಾತ್ರ ಮಾಡಲಾಗುತ್ತಿದೆ.

ಸೆಪ್ಟೆಂಬರ್ 30 ರಂದು ವಿತ್ತ ಸಚಿವಾಲಯ ಹೊರಡಿಸಿದ ಅಧಿಸೂಚನೆಯಂತೆ ಎಥೆನಾಲ್ ಮತ್ತು ಮೆಥನಾಲ್ ಮಿಶ್ರಣವಿಲ್ಲದ ಪೆಟ್ರೋಲ್ ಮೇಲೆ ಲೀಟರ್‍ಗೆ ತಲಾ ರೂ 1.40 ಬದಲು ರೂ 3.40 ಅಬಕಾರಿ ಸುಂಕ ವಿಧಿಸಲಾಗುವುದಾದರೆ ಡೀಸೆಲ್‍ಗೆ ಪ್ರಸ್ತುತ ಇರುವ ರೂ 2.60 ಅಬಕಾರಿ ಸುಂಕದ ಬದಲು ರೂ 4.60 ಸುಂಕ ವಿಧಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News