ಲಖಿಂಪುರಖೇರಿ ಹಿಂಸಾಚಾರ ಸಂತ್ರಸ್ತರ ಕುಟುಂಬಕ್ಕೆ ಇದುವರೆಗೆ ಪರಿಹಾರ ಸಿಕ್ಕಿಲ್ಲ: ಪ್ರಧಾನಿಗೆ ಪತ್ರ ಬರೆದ ಸಂಯುಕ್ತ ಕಿಸ

Update: 2022-10-01 16:08 GMT

ಹೊಸದಿಲ್ಲಿ, ಅ. 9: ಕಳೆದ ವರ್ಷ ಲಖಿಂಪುರಖೇರಿಯಲ್ಲಿ ನಡೆದ  ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಇದುವರೆಗೆ ಪರಿಹಾರ ಸಿಕ್ಕಿಲ್ಲ  ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದೆ ಪತ್ರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ.‘‘ಮೃತಪಟ್ಟ ರೈತರು ಹಾಗೂ ಪ್ರತಿಭಟನಕಾರರೊಂದಿಗೆ ಸರಕಾರ ಒಪ್ಪಂದಕ್ಕೆ ಬಂದಿತ್ತು. ಆದರೆ, ಈ ಒಪ್ಪಂದದ ಹೆಚ್ಚಿನ ಅಂಶಗಳು ಇದುವರೆಗೆ ಅನುಷ್ಠಾನಗೊಂಡಿಲ್ಲ’’ ಎಂದು ಪತ್ರದಲ್ಲಿ ಹೇಳಲಾಗಿದೆ. 

ಕೇಂದ್ರ ಸಚಿವ ಅಜಯ್ ಮಿಶ್ರ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನಿ ಅವರನ್ನು ಆಗ್ರಹಿಸಿದೆ. ಕಳೆದ ವರ್ಷ ಅಕ್ಟೋಬರ್ ೩ರಂದು ಲಖಿಂಪುರಖೇರಿಯಲ್ಲಿ ನಡೆದ ಹಿಂಸಾಚಾರ ಭಾಗಿಯಾದ ಆರೋಪಿಗಳಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಕೂಡ ಇದ್ದಾರೆ.ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ಲಖಿಂಪುರಖೇರಿ ಜಿಲ್ಲೆಯಲ್ಲಿ ಅಕ್ಟೋಬರ್ ೩ರಂದು ನಡೆದ ಪ್ರತಿಭಟನೆ ಸಂದರ್ಭ ಸಂಭವಿಸಿದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ೮ ಮಂದಿ ಮೃತಪಟ್ಟಿದ್ದರು. ಪ್ರತಿಭಟನಕಾರರ ಮೇಲೆ ಹರಿದ ವಾಹನ ಆಶಿಶ್ ಮಿಶ್ರಾ ಅವರಿಗೆ ಸೇರಿದ್ದು ಎಂದು ರೈತ ಸಂಘಟನೆಗಳು ಆರೋಪಿಸಿದ್ದವು. ಈ ಕೃಷಿ ಕಾಯ್ದೆಗಳನ್ನು ಕೇಂದ್ರ ಸರಕಾರ ಅನಂತರ ಹಿಂಪಡೆದುಕೊಂಡಿತ್ತು. 

ಈ ಪ್ರಕರಣದಲ್ಲಿ ಮಿಶ್ರಾ ಅವರನ್ನು ಅಕ್ಟೋಬರ್ ೯ರಂದು ಮೊದಲು ಬಂಧಿಸಲಾಗಿತ್ತು. ಫೆಬ್ರವರಿ ೧೦ರಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು. ಅನಂತರ ಫೆಬ್ರವರಿ ೧೫ರಂದು ಅವರು ಜೈಲಿನಿಂದ ಬಿಡುಗಡೆಯಗಿದ್ದರು.ಆಶಿಶ್ ಮಿಶ್ರಾ ಅವರಿಗೆ ಜಾಮೀನು ನೀಡಿರುವುದನ್ನು ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಉಚ್ಚ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು ಹಾಗೂ ಆಶಿಶ್ ಮಿಶ್ರಾನ ಜಾಮೀನನ್ನು ಎಪ್ರಿಲ್ ೧೮ರಂದು ರದ್ದುಗೊಳಿಸಿತ್ತು. ಆಶಿಶ್ ಮಿಶ್ರಾ ಪ್ರಸಕ್ತ ಲಖಿಂಪುರ  ಕಾರಾಗೃಹದಲ್ಲಿ ಇದ್ದಾರೆ.

ಪತ್ರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ, ಮಿಶ್ರಾ ಅವರನ್ನು ಸಚಿವರನ್ನಾಗಿ ಮುಂದುವರಿಸಿರುವುದು ಅವಮಾನಕಾರಿ. ಅಲ್ಲದೆ, ಕೇಂದ್ರ ಸರಕಾರ ಅವರನ್ನು ರಕ್ಷಿಸುತ್ತಿದೆ ಎಂದು ಹೇಳಿದೆ.ಪ್ರತಿ ಸಂತ್ರಸ್ತರ ಕುಟುಂಬದ ಸದಸ್ಯನಿಗೆ ಸರಕಾರಿ ಉದ್ಯೋಗ ನೀಡುವ ಭರವಸೆಯನ್ನು ಕೇಂದ್ರ ಸರಕಾರ ಪೂರೈಸಿಲ್ಲ. ಸರಕಾರ ದಾಖಲಿಸಿದ ಸುಳ್ಳು ಪ್ರಕರಣದಿಂದ ನಾಲ್ವರು ಪ್ರತಿಭಟನಕಾರರು ಈಗಲೂ ಕಾರಾಗೃಹದಲ್ಲಿ  ಇದ್ದಾರೆ ಎಂದು ಅದು ಆರೋಪಿಸಿದೆ.

ಅವರ ವಿರುದ್ಧದ ಆರೋಪವನ್ನು ಹಿಂಪಡೆಯಲಾಗುವುದು ಹಾಗೂ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಸರಕಾರ ನಮಗೆ ತಿಳಿಸಿತ್ತು  ಎಂದು ಪತ್ರದಲ್ಲಿ ಹೇಳಲಾಗಿದೆ. ಹಿಂಸಾಚಾರದ ಮೊದಲ ವರ್ಷದ ಹಿನ್ನೆಲೆಯಲ್ಲಿ ಅಕ್ಟೋಬರ್ ೩ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News