ಸಬರಮತಿ ನದಿ ನೀರು ಅನಾರೋಗ್ಯಕರ: ಕೊನೆಯ ಕ್ಷಣದಲ್ಲಿ ನ್ಯಾಶನಲ್ ಗೇಮ್ಸ್‌ನ ಟ್ರಯತ್ಲಾನ್ ಸ್ಪರ್ಧೆ ಸ್ಥಳಾಂತರ

Update: 2022-10-01 16:49 GMT
ಸಬರಮತಿ ನದಿ, ಗಾಂಧಿನಗರದ ಐಐಟಿಯ ಈಜುಕೊಳ, Photo: Indian express

  ಗಾಂಧಿನಗರ, ಅ.1: ಟ್ರಯತ್ಲೀಟ್‌ಗಳು 36ನೇ ಆವೃತ್ತಿಯ ನ್ಯಾಶನಲ್ ಗೇಮ್ಸ್‌ನಲ್ಲಿ 50 ಕಿ.ಮೀ. ಸೈಕ್ಲಿಂಗ್ ಹಾಗೂ 5 ಕಿ.ಮೀ. ರೋಡ್ ರೇಸ್‌ನ ಜೊತೆಗೆ ಸಬರಮತಿ ನದಿಯಲ್ಲಿ 750 ಮೀಟರ್ ದೂರ ಈಜಬೇಕಾಗಿತ್ತು. ಆದರೆ ಸಬರಮತಿ ನದಿ ನೀರು ಈಜಲು ಯೋಗ್ಯವಾಗಿಲ್ಲದ ಕಾರಣ ಈ ಸ್ಪರ್ಧೆಯನ್ನು ಗಾಂಧಿನಗರದ ಐಐಟಿಯ ಈಜುಕೊಳಕ್ಕೆ ಕೊನೆಯ ಕ್ಷಣದಲ್ಲಿ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

 ಸಬರಮತಿಯ ನದಿ ನೀರನ್ನು ಸಂಘಟಕರು ‘ಅನಾರೋಗ್ಯಕರ ಹಾಗೂ ಸೋಂಕುಕಾರಕ ಎಂದು ಬಣ್ಣಿಸಿದ್ದು, ಇದರಿಂದ ಈಜುಗಾರರಿಗೆ ಸೋಂಕು ತಗಲುತ್ತದೆ ಎಂದು ಹೇಳಿದ್ದಾರೆ.

"ಜುಲೈನಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಗುಜರಾತ್ ಅನ್ನು ರಾಷ್ಟ್ರೀಯ ಗೇಮ್ಸ್‌ನ ಆತಿಥೇಯ ರಾಜ್ಯ ಎಂದು ಘೋಷಿಸಿದಾಗ ಅಮ್ದವದ್ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ಸಬರಮತಿ ನೀರಿನ ಗುಣಮಟ್ಟ ಪರಿಶೀಲಿಸಲು ಅನೇಕ ಪರೀಕ್ಷೆಗಳನ್ನು ನಡೆಸಿದ್ದರು. ಫಲಿತಾಂಶವು ನೀರಿನ ಗುಣಮಟ್ಟ ಉತ್ತಮವಾಗಿಲ್ಲ ಎಂದು ತೋರಿಸಿದೆ. ನೀರು ಕಲುಷಿತವಾಗಿರುವುದರಿಂದ ಸ್ಪರ್ಧೆ ಇಲ್ಲಿ ನಡೆಸಬಾರದು'' ಎಂದು ಗುಜರಾತ್ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಉಪಾಧ್ಯಕ್ಷ ವೀರೇಂದ್ರ ನಾನಾವತಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.

"ಒಳಚರಂಡಿ ನೀರನ್ನು ನದಿಗೆ ಬಿಡುವುದರಿಂದ ನದಿ ನೀರು ಈಜು ಸ್ಪರ್ಧೆಗೆ ಅಯೋಗ್ಯವಾಗಿದೆ. ಮುಂಗಾರು ಆರಂಭವಾದ ನಂತರ ನೀರು ಸ್ವಚ್ಛವಾಗುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ನಿಜವಾಗಿ ಏನೂ ಆಗಲಿಲ್ಲ. ಕೊನೆಯ ಕ್ಷಣದಲ್ಲಿ ಟ್ರಯತ್ಲಾನ್ ಸ್ಪರ್ಧೆಯನ್ನು ಗಾಂಧಿನಗರಕ್ಕೆ ವರ್ಗಾಯಿಸಲಾಗಿದೆ' ಎಂದು ಅನುಭವಿ ಈಜು ನಿರ್ವಾಹಕ ನಾನಾವತಿ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News