ಸಿಪಿಐ(ಎಂ) ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್ ನಿಧನ

Update: 2022-10-01 17:11 GMT
PHOTO: PTI

ತಿರುವನಂತಪುರಂ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ ವಾದಿ) ಹಿರಿಯ ನಾಯಕ ಮತ್ತು ಪಕ್ಷದ ಕೇರಳ ಘಟಕದ ಮಾಜಿ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ಅಕ್ಟೋಬರ್ 1 ರಂದು ಚೆನ್ನೈನಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು ಮತ್ತು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚಿನವರೆಗೂ ಅವರು ರಾಜ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. ಅವರ ಅನಾರೋಗ್ಯದಿಂದಾಗಿ ಕರ್ತವ್ಯಗಳನ್ನು ನಿರ್ವಹಿಸಲು ಕಷ್ಟಕರವಾದಾಗ ಅವರು ತಮ್ಮ ಸ್ಥಾನವನ್ನು ತ್ಯಜಿಸಿದರು. ಕೊಡಿಯೇರಿ ಸಿಪಿಐ(ಎಂ) ಪಾಲಿಟ್‌ಬ್ಯೂರೋ ಸದಸ್ಯರೂ ಆಗಿದ್ದರು.

ಆಗಸ್ಟ್ ಅಂತ್ಯದಲ್ಲಿ, ಕೊಡಿಯೇರಿ ಅವರು ಸತತ ಮೂರು ಅವಧಿಗೆ ಪಕ್ಷದ ಕಾರ್ಯದರ್ಶಿ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಪಕ್ಷಕ್ಕೆ ಮನವಿ ಮಾಡಿದ್ದರು. ನಂತರ ಅವರನ್ನು ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೆಪ್ಟೆಂಬರ್ 9 ರಂದು ಕೊಡಿಯೇರಿ ಅವರನ್ನು ಭೇಟಿ ಮಾಡಿದ್ದು, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂಬ ಊಹಾಪೋಹಗಳನ್ನು ಹುಟ್ಟುಹಾಕಿತ್ತು.

ಅವರ ಸ್ಥಾನಕ್ಕೆ ಪಕ್ಷದ ಹಿರಿಯ ನಾಯಕ ಎಂವಿ ಗೋವಿಂದನ್ ಆಯ್ಕೆಯಾಗಿದ್ದಾರೆ. ಕೊಡಿಯೇರಿ ಅವರು ತಮ್ಮ ಸಹೋದ್ಯೋಗಿ ಎ. ವಿಜಯರಾಘವನ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದ ನಂತರ ನವೆಂಬರ್, 2020 ರಲ್ಲಿ ಆರೋಗ್ಯ ಸಮಸ್ಯೆಗಳಿಂದಾಗಿ ಕೆಲಸದಿಂದ ತಾತ್ಕಾಲಿಕ ವಿರಾಮವನ್ನು ಪಡೆದರು. ಡಿಸೆಂಬರ್ 2021 ರಲ್ಲಿ, ತಿಂಗಳ ಚಿಕಿತ್ಸೆಯ ನಂತರ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಮತ್ತೆ ಸೇರಿದ ಒಂದು ದಿನದ ಬಳಿಕ, ಆಂಕೊಲಾಜಿಸ್ಟ್‌ಗಳು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಕೊಡಿಯೇರಿ ತಮ್ಮ ಅನಾರೋಗ್ಯದ ಬಗ್ಗೆ ಹೇಳಿಕೊಂದಿದ್ದರು.

ಕಣ್ಣೂರು ಜಿಲ್ಲೆಯ ತಲಶ್ಶೇರಿಯ ಕೊಡಿಯೇರಿ ಗ್ರಾಮದಲ್ಲಿ ಜನಿಸಿದ ಅವರು, 1970ರಲ್ಲಿ ಹದಿಹರೆಯದಲ್ಲಿದ್ದಾಗಲೇ ಸಿಪಿಐ(ಎಂ) ಸೇರಿದ್ದರು. ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ ಸೇರಿದಂತೆ ಪಕ್ಷದ ವಿವಿಧ ಪ್ರಮುಖ ಸಂಘಟನೆಗಳಲ್ಲಿ ನಾಯಕತ್ವ ವಹಿಸಿದ್ದರು. 1975-77ರ ತುರ್ತು ಪರಿಸ್ಥಿತಿಯಲ್ಲಿ, ಕೊಡಿಯೇರಿಯವರು ತಮ್ಮ 20ನೇ ವಯಸ್ಸಿನಲ್ಲಿದ್ದಾಗ 16 ತಿಂಗಳುಗಳ ಕಾಲ ಜೈಲು ವಾಸ ಅನುಭವಿಸಿದ್ದರು.

ಸಿಪಿಐ(ಎಂ)ನ ಕಣ್ಣೂರು ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಐದು ಬಾರಿ ತಲಶ್ಶೇರಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1982, 1987, 2001, 2006 ಮತ್ತು 2011. 2006 ರಲ್ಲಿ ಎಡ ಪ್ರಜಾಸತ್ತಾತ್ಮಕ ರಂಗವು ಅಧಿಕಾರಕ್ಕೆ ಬಂದಾಗ ಅವರು ಗೃಹ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News