ಭಾರತದ ಸ್ವಚ್ಛ ನಗರ: ಮಧ್ಯಪ್ರದೇಶದ ಇಂದೋರ್‌ಗೆ ಪ್ರಥಮ ಸ್ಥಾನ

Update: 2022-10-01 16:56 GMT
ಸಾಂದರ್ಭಿಕ ಚಿತ್ರ (ಪಿಟಿಐ)

ಹೊಸದಿಲ್ಲಿ: ಮಧ್ಯಪ್ರದೇಶದ ಇಂದೋರ್ ನಗರವು ಸತತ ಆರನೇ ಬಾರಿಗೆ ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸೂರತ್ ಮತ್ತು ನವಿ ಮುಂಬೈ ನಂತರದ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ ಫಲಿತಾಂಶಗಳು ಹೇಳಿವೆ.

'ಸ್ವಚ್ಛ ಸರ್ವೇಕ್ಷಣ್ ಅವಾರ್ಡ್ಸ್ 2022' ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳ ವಿಭಾಗದಲ್ಲಿ, ಮಧ್ಯಪ್ರದೇಶವು ಮೊದಲ ಸ್ಥಾನವನ್ನು ಪಡೆದುಕೊಂಡಿದೆ, ಛತ್ತೀಸ್ಗಢ ಮತ್ತು ಮಹಾರಾಷ್ಟ್ರವು ನಂತರದ ಸ್ಥಾನ ಪಡೆದುಕೊಂಡಿದೆ.

ಇಂದೋರ್ ಮತ್ತು ಸೂರತ್ ಈ ವರ್ಷ ದೊಡ್ಡ ನಗರಗಳ ವಿಭಾಗದಲ್ಲಿ ತಮ್ಮ ಅಗ್ರ ಸ್ಥಾನಗಳನ್ನು ಉಳಿಸಿಕೊಂಡಿದ್ದು, ಮೂರನೆಯ ಸ್ಥಾನದಲ್ಲಿದ್ದ ವಿಜಯವಾಡವನ್ನು ಮುಂಬೈ ನಗರ ಈ ಬಾರಿ ಹಿಂದಿಕ್ಕಿದೆ. 

100ಕ್ಕಿಂತ ಕಡಿಮೆ ನಗರ ಸ್ಥಳೀಯ ಸಂಸ್ಥೆಗಳನ್ನು ಹೊಂದಿರುವ ರಾಜ್ಯಗಳ ಪೈಕಿ ತ್ರಿಪುರಾ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದ್ದು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ನಗರಗಳ ವಿಭಾಗದಲ್ಲಿ, ಮಹಾರಾಷ್ಟ್ರದ ಪಂಚಗಣಿ ಮೊದಲ ಸ್ಥಾನದಲ್ಲಿದ್ದರೆ, ಛತ್ತೀಸ್‌ಗಢದ ಪಟಾನ್ (NP) ಮತ್ತು ಮಹಾರಾಷ್ಟ್ರದ ಕರ್ಹಾದ್ ನಂತರದ ಸ್ಥಾನದಲ್ಲಿದೆ.

1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ವಿಭಾಗದಲ್ಲಿ ಹರಿದ್ವಾರವನ್ನು ಸ್ವಚ್ಛ ಗಂಗಾ ಪಟ್ಟಣವೆಂದು ಪರಿಗಣಿಸಲಾಗಿದೆ, ನಂತರದ ಸ್ಥಾನವನ್ನು ವಾರಣಾಸಿ ಮತ್ತು ರಿಷಿಕೇಶ್ ಪಡೆದುಕೊಂಡಿದೆ.  

ಮಹಾರಾಷ್ಟ್ರದ ದಿಯೋಲಾಲಿ ದೇಶದ ಸ್ವಚ್ಛ ಕಂಟೋನ್ಮೆಂಟ್ ಬೋರ್ಡ್ ಎಂದು ಗುರುತಿಸಲ್ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News