ದೃಶ್ಯಂ ಸಿನೆಮಾ ಮಾದರಿಯಲ್ಲಿ ಕೊಲೆ: ಹೊಸದಾಗಿ ನಿರ್ಮಿಸಲಾದ ಮನೆಯಡಿಯಿಂದ ಶವ ಪತ್ತೆ

Update: 2022-10-01 17:02 GMT
ಮೃತ ಬಿಂದುಮೋನ್‌ (TheNewIndianExpress)

ಕೊಟ್ಟಯಂ: ಕೇರಳದ ಚಂಗನಾಶ್ಶೇರಿಯಲ್ಲಿ ಜನಪ್ರಿಯ ಮಲಯಾಳಂ ಸಿನಿಮಾ ‘ದೃಶ್ಯಂ’ ಮಾದರಿಯಲ್ಲಿ ಯೋಜನೆ ರೂಪಿಸಿ ಮಾಡಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಮೃತರನ್ನು ಬಿಂದುಮೋನ್ 43 ಎಂದು ಗುರುತಿಸಲಾಗಿದ್ದು, ಇವರು ಅಲಪ್ಪುಳದ ಆರ್ಯಡ್ ನಿವಾಸಿಯಾಗಿದ್ದಾರೆ. ಹೊಸದಾಗಿ ನಿರ್ಮಾಣಗೊಂಡಿದ್ದ ಮನೆಯ ನೆಲದಡಿಯಲ್ಲಿ ಅವರ ಮೃತದೇಹದ ಅವಶೇಷಗಳು ಪತ್ತೆಯಾಗಿವೆ. ತಹಸೀಲ್ದಾರ್ ಸಮ್ಮುಖದಲ್ಲಿ ಪಂಚನಾಮೆ ಮುಗಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಆಲಪ್ಪುಳ ಮೂಲದ ಬಿಂದುಮೋನ್ ಸೆಪ್ಟೆಂಬರ್ 26 ರಂದು ನಾಪತ್ತೆಯಾಗಿದ್ದಾರೆ ಎಂದು ಅವರ ಸಂಬಂಧಿಕರು ಆಲಪ್ಪುಳ ಉತ್ತರ ಪೊಲೀಸರಿಗೆ ನಾಪತ್ತೆ ಪ್ರಕರಣವನ್ನು ದಾಖಲಿಸಿದ ನಂತರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದರು.

ತನಿಖೆ ವೇಳೆ ಅವರ ಮೊಬೈಲ್ ಫೋನ್ ಅನ್ನು ಚಂಗನಾಶ್ಶೇರಿ ಟವರ್ ಲೊಕೇಶನ್‌ನಲ್ಲಿ ಪೊಲೀಸರು ಪತ್ತೆಹಚ್ಚಿದರು. ಬಿಂದುಮೋನ್ ಕೊನೆಯದಾಗಿ ಪೂವಂ ಮೂಲದ ತನ್ನ ಸ್ನೇಹಿತ ಮುತ್ತುಕುಮಾರ್ ಅವರಿಗೆ ಕರೆ ಮಾಡಿದ್ದಾರೆ ಎಂಬುದು ತನಿಖೆ ವೇಳೆ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಮುತ್ತುಕುಮಾರ್ ಅವರ ಮನೆಯನ್ನು ಪೊಲೀಸರು ಶೋಧಿಸಿದರೂ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ.

ಈ ಪ್ರದೇಶದಲ್ಲಿ ತನಿಖೆ ನಡೆಸಿದಾಗ ಕಳೆದ ಕೆಲವು ದಿನಗಳ ಹಿಂದೆ ಮನೆ ನಿರ್ಮಾಣ ಕಾಮಗಾರಿ ನಡೆದಿದ್ದು, ಮನೆಯ ಅಡಿಪಾಯ ಅಗೆದು ಕಾಂಕ್ರೀಟ್ ಹಾಕಿರುವುದು ಪೊಲೀಸರ ಸಂದೇಹಕ್ಕೆ ಕಾರಣವಾಗಿದೆ. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಆರ್‌ಡಿಒ ಸೂಚನೆಯಂತೆ ಚಂಗನಾಶ್ಶೇರಿ ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.  ಶನಿವಾರ ಬೆಳಗ್ಗೆ ಚಂಗನಾಶ್ಶೇರಿ ಠಾಣಾಧಿಕಾರಿ ರಿಚರ್ಡ್ ವರ್ಗೀಸ್ ನೇತೃತ್ವದ ಪೊಲೀಸ್ ತಂಡ ಹೊಸದಾಗಿ ಕಾಂಕ್ರೀಟ್ ಮಾಡಿದ ಜಾಗವನ್ನು ಅಗೆದು ನೋಡಿದಾಗ ಗೋಣಿಚೀಲದಲ್ಲಿ ಕಟ್ಟಲಾಗಿದ್ದ ಶವ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News