ಕೋಮು ಸಾಮರಸ್ಯ: ಜೈಲಿನಲ್ಲಿ 200 ಮಂದಿಯಿಂದ ನವರಾತ್ರಿ ಉಪವಾಸ
ಮುಝಫ್ಫರ್ ನಗರ: ಇಲ್ಲಿನ ಜಿಲ್ಲಾ ಕಾರಾಗೃಹದ 200 ಮಂದಿ ಮುಸ್ಲಿಂ ಕೈದಿಗಳು ನವರಾತ್ರಿ ಉಪವಾಸ ಕೈಗೊಳ್ಳುವ ಮೂಲಕ ಧಾರ್ಮಿಕ ಸಾಮರಸ್ಯಕ್ಕೆ ಉದಾಹರಣೆಯಾಗಿದ್ದಾರೆ. ಹಿಂದೂ ಕೈದಿಗಳ ಜತೆ ಸೇರಿ ನವರಾತ್ರಿಯ ಒಂಬತ್ತು ದಿನಗಳ ಕಾಲ ಇವರು ಕೂಡಾ ನಿರಾಹಾರ ಕೈಗೊಂಡಿದ್ದಾರೆ ಎಂದು timesofindia.com ವರದಿ ಮಾಡಿದೆ.
"ಮುಸ್ಲಿಂ ಕೈದಿಗಳು ನವರಾತ್ರಿ ಉಪವಾಸ ಕೈಗೊಂಡಿರುವುದು ಹಿಂದೂ ಸಹ ಕೈದಿಗಳ ಭಾವನೆಗಳಿಗೆ ಪ್ರತಿಸ್ಪಂದಿಸುವ ಕ್ರಮವಾಗಿದ್ದು, ಈ ಹಿಂದೂ ಕೈದಿಗಳು ರಮಝಾನ್ ಮಾಸದಲ್ಲಿ ರೋಝಾ ಕೈಗೊಂಡಿದ್ದರು" ಎಂದು ಜೈಲು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಝಫ್ಫರ್ ನಗರ ಜಿಲ್ಲಾ ಕಾರಾಗೃಹದಲ್ಲಿರುವ 3000ಕ್ಕೂ ಹೆಚ್ಚು ಕೈದಿಗಳ ಪೈಕಿ 1100 ಮಂದಿ ಹಿಂದೂಗಳು ಹಾಗೂ 218 ಮಂದಿ ಮುಸ್ಲಿಮರು ನವರಾತ್ರಿ ಉಪವಾಸ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಕಾರಾಗೃಹದ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಉಪವಾಸ ಕೈಗೊಂಡಿರುವ ಕೈದಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ಕ್ಯಾಂಟೀನ್‍ನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. "ಹಣ್ಣು, ಹಾಲು, ಗೋದಿಹುಡಿಯಿಂದ ಮಾಡಿದ ಪೂರಿ, ಚಹಾ ಮತ್ತು ಇತರ ತಿನಸುಗಳು ಉಪವಾಸ ಕೈಗೊಂಡವರಿಗೆ ಲಭ್ಯವಾಗುವಂತೆ ಮಾಡಲಾಗಿದೆ" ಎಂದು ಜೈಲು ಅಧೀಕ್ಷಕ ಸೀತಾರಾಮ ಶರ್ಮ ತಿಳಿಸಿದ್ದಾರೆ.
ಸಂಸ್ಕೃತಿ ಮತ್ತು ಧಾರ್ಮಿಕ ಏಕತೆಯ ಬಗೆಗಿನ ಆಳವಾದ ನಂಬಿಕೆಯ ಕಾಣದಿಂದ ಉಪವಾಸ ಕೈಗೊಂಡಿರುವುದಾಗಿ ಕೈದಿಯೋರ್ವ ಹೇಳಿದ್ದಾನೆ. ಕೋಮು ಸಾಮರಸ್ಯ ಹೇಗೆ ಕಾಪಾಡಬಹುದು ಎನ್ನುವುದನ್ನು ಜನ ಜೈಲಿನಿಂದ ಕಲಿಯಬೇಕು. ನಾವು ಒಂದೇ ಸಂಸ್ಕೃತಿಯಲ್ಲಿ ಸಹಬಾಳ್ವೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾನೆ.