ನವಿ ಮುಂಬೈ: ಕಟ್ಟಡ ಕುಸಿತ, ಅವಶೇಷಗಳಿಂದ ವ್ಯಕ್ತಿಯ ಮೃತದೇಹ ಪತ್ತೆ
ನವಿ ಮುಂಬೈ: ಕೊಪರ್ಖೈನೆಯ ಬೋಂಕೋಡ್ ಗ್ರಾಮದಲ್ಲಿ ಶನಿವಾರ ಸಂಜೆ ಮೂರು ಅಂತಸ್ತಿನ ವೈಷ್ಣವಿ ಅಪಾರ್ಟ್‌ಮೆಂಟ್ ಕಟ್ಟಡದ ಒಂದು ಭಾಗವು ಕುಸಿದು ಬಿದ್ದಿದೆ. ಅಗ್ನಿಶಾಮಕ ದಳದ ತಂಡವು ಅವಶೇಷಗಳ ರಾಶಿಯಲ್ಲಿ ಸಿಕ್ಕಿಬಿದ್ದ ನಿವಾಸಿಗಳ ಹುಡುಕಾಟ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾಗ ರವಿವಾರ ಬೆಳಿಗ್ಗೆ ಓರ್ವ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ವಾಶಿ ಅಗ್ನಿಶಾಮಕ ದಳದ ವಿಭಾಗೀಯ ಅಧಿಕಾರಿ ಪುರುಷೋತ್ತಮ್ ಜಾಧವ್ ಪ್ರಕಾರ, ಅವಶೇಷಗಳಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಪ್ರಿಯವರ್ತ್ ದತ್ (31) ಎಂದು ಗುರುತಿಸಲಾಗಿದೆ.
ಬೊಂಕೋಡ್ ಗ್ರಾಮದಲ್ಲಿ ಕಟ್ಟಡ ಕುಸಿತದ ಬಗ್ಗೆ ರಾತ್ರಿ 10.50 ಕ್ಕೆ ತುರ್ತು ಕರೆ ಬಂದ ನಂತರ, ನಮ್ಮ ಅಗ್ನಿಶಾಮಕ ದಳದ ರಕ್ಷಣಾ ತಂಡವು ಕುಸಿದ ಕಟ್ಟಡದ ಅವಶೇಷಗಳ ರಾಶಿಯಲ್ಲಿ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂದು ಹುಡುಕಾಡಿದೆ. ಕಟ್ಟಡವು ಹಳೆಯದಾಗಿತ್ತು ಹಾಗೂ ಶಿಥಿಲಗೊಂಡಿದ್ದರಿಂದ ನಿವಾಸಿಗಳು ಮಧ್ಯಾಹ್ನವೇ ಕಟ್ಟಡವನ್ನು ತೆರವು ಮಾಡಿದ್ದರು. ಆದರೂ, ನಾವು ಸುಮಾರು ಆರು ಗಂಟೆಗಳ ಕಾಲ ಹುಡುಕಾಟವನ್ನು ಮುಂದುವರೆಸಿದ್ದೇವೆ. ರವಿವಾರ ಬೆಳಿಗ್ಗೆ 6.40 ರ ಸುಮಾರಿಗೆ ಅವಶೇಷಗಳ ಅಡಿಯಲ್ಲಿ ಹುಡುಕುತ್ತಿರುವಾಗ ಒಬ್ಬ ವ್ಯಕ್ತಿಯ ಶವ ಸಿಕ್ಕಿದೆ ಎಂದು ಜಾಧವ್ ಹೇಳಿದ್ದಾರೆ .