ಉ.ಪ್ರ.: ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ಬೆಂಕಿ ಅವಘಡ; ಐವರು ಸಾವು, ೬೪ ಮಂದಿಗೆ ಗಾಯ

Update: 2022-10-03 18:29 GMT

ಲಕ್ನೋ, ಅ. 3: ಉತ್ತರಪ್ರದೇಶದ ಭದೋಹಿ ಜಿಲ್ಲೆಯ ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ರವಿವಾರ ರಾತ್ರಿ ಬೆಂಕಿ ಅಪಘಾತ ಸಂಭವಿಸಿ ಐವರು ಸಾವನ್ನಪ್ಪಿದ್ದಾರೆ ಹಾಗೂ 68 ಮಂದಿ ಗಾಯಗೊಂಡಿದ್ದಾರೆ. 
ಔರೈ ಪೊಲೀಸ್ ಠಾಣೆಯ ಸಮೀಪದ ನಾರ್ತುವಾ ಗ್ರಾಮದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಗೌರಂಗ್ ರಥಿ ಅವರು ತಿಳಿಸಿದ್ದಾರೆ. 
ಈ ಸ್ಥಳದಲ್ಲಿ ಡಿಜಿಟಲ್ ಪ್ರದರ್ಶನ ನಡೆಯುತ್ತಿತ್ತು. ಬೆಂಕಿ ಅವಘಡ ಸಂಭವಿಸಿದ ಸಂದರ್ಭ ೩೦೦ರಿಂದ ೪೦೦ ಜನರು ಅಲ್ಲಿದ್ದರು. ಬೆಂಕಿ ವ್ಯಾಪಿಸಿ ಪೆಂಡಾಲ್ ಸಂಪೂರ್ಣ ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವಘಡದಲ್ಲಿ ಮೃತಪಟ್ಟವರನ್ನು ಅಂಕುಶ್ ಸೋನಿ (10), ಜಯಾ ದೇವಿ (45), ನವೀನ್ ಆಲಿಯಾಸ್ ಉಜ್ವಲ್ (10), ಆರತಿ ದೇವಿ (48) ಹಾಗೂ ಹರ್ಷವರ್ಧನ್ (8) ಎಂದು ಗುರುತಿಸಲಾಗಿದೆ. ಮೃತಪಟ್ಟವರಲ್ಲಿ ಇಬ್ಬರು  ಜಯಾ ದೇವಿ ಅವರ ಮೊಮ್ಮಕ್ಕಳು. 
ಗಾಯಗೊಂಡವರಲ್ಲಿ
42 ಮಂದಿಯನ್ನು ವಾರಣಾಸಿ ಆಸ್ಪತ್ರೆ, 18 ಮಂದಿಯನ್ನು ಔರೈ ಆಸ್ಪತ್ರೆ ಹಾಗೂ ೪ ಮಂದಿಯನ್ನು ಪ್ರಯಾಗ್‌ರಾಜ್ ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ರಥಿ ತಿಳಿಸಿದ್ದಾರೆ. 
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ, ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 
ಔರೈ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಅವರು ಹೇಳಿದ್ದಾರೆ. 
ಗಾಯಗೊಂಡವರು ಬೇಗನೆ ಗುಣಮುಖರಾಗಲಿ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹಾರೈಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News