ಭಾರತೀಯ ವಾಯು ಪ್ರದೇಶದಲ್ಲಿ ಇರಾನ್ ವಿಮಾನಕ್ಕೆ ಬಾಂಬ್ ಬೆದರಿಕೆ

Update: 2022-10-03 17:58 GMT

ಹೊಸದಿಲ್ಲಿ, ಅ. 3:  ಇರಾನ್‌ನಿಂದ ಚೀನಾಕ್ಕೆ ತೆರಳುತ್ತಿದ್ದ ಇರಾನ್‌ನ ಪ್ರಯಾಣಿಕರ ವಿಮಾನಕ್ಕೆ ಸೋಮವಾರ ಭಾರತೀಯ ವಾಯು ಪ್ರದೇಶ ಪ್ರವೇಶಿಸುತ್ತಿದ್ದಂತೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕೂಡಲೇ ಭಾರತೀಯ ವಾಯು ಪಡೆಯ ಸುಖೋಯ್ ಎಸ್‌ಯು-೩೦ ಯುದ್ಧ ವಿಮಾನಗಳನ್ನು  ಕಾರ್ಯಾಚರಣೆಗೆ ಸನ್ನದ್ಧಗೊಳಿಸಲಾಗಿತ್ತು.  
ಇರಾನ್‌ನ ಟೆಹ್ರಾನ್‌ನಿಂದ ಚೀನಾದ ಗುವಾಂಗ್‌ಝೌಗೆ ಪ್ರಯಾಣಿಸುತ್ತಿದ್ದ   ಇರಾನ್‌ನ ‘ಮಹಾನ್’ ವಾಯು ಯಾನ ಸಂಸ್ಥೆಯ ಪ್ರಯಾಣಿಕರ ವಿಮಾನಕ್ಕೆ ಭಾರತದಲ್ಲಿ ಇಳಿಯಲು ಎರಡು ಆಯ್ಕೆಗಳನ್ನು ನೀಡಲಾಯಿತು. ಆದರೆ, ವಿಮಾನ ಅದನ್ನು ನಿರಾಕರಿಸಿ ಪ್ರಯಾಣ ಮುಂದುವರಿಸಿತು ಎಂದು ವಾಯ ಪಡೆಯ ಹೇಳಿಕೆ ತಿಳಿಸಿದೆ. 
ಅನಂತರ ಭಾರತೀಯ ವಾಯು ಪಡೆಯ ಯುದ್ಧ ವಿಮಾನ ಸುಖೋಯ್-
30 ಸುರಕ್ಷಿತ ದೂರದಿಂದ ಇರಾನ್ ವಿಮಾನವನ್ನು ಅನುಸರಿಸಿತು. ಇರಾನ್ ವಿಮಾನ ಚೀನಾ ವಾಯು ಪ್ರದೇಶವನ್ನು ಪ್ರವೇಶಿಸಿರುವುದು ವಿಮಾನಗಳ ಹಾರಾಟವನ್ನು ಗುರುತಿಸುವ ‘‘ಫ್ಲೈಟ್‌ರಾಡರ್’’ಮೂಲಕ ತಿಳಿದು ಬಂತು ಎಂದು ಹೇಳಿಕೆ ತಿಳಿಸಿದೆ. 
ಇರಾನ್‌ನ ವಿಮಾನ ಬಾಂಬ್ ಬೆದರಿಕೆ ಕರೆಯನ್ನು ಬೆಳಗ್ಗೆ 9:20 ಕ್ಕೆ ಸ್ವೀಕರಿಸಿತು. ತರುವಾಯ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ವಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 
‘‘ಮೊದಲು ಜೈಪುರದಲ್ಲಿ ಇಳಿಸಲು, ಅನಂತರ ಚಂಡಿಗಢದಲ್ಲಿ ಇಳಿಸಲು ಇರಾನ್‌ನ ವಿಮಾನಕ್ಕೆ ಆಯ್ಕೆ ನೀಡಲಾಗಿತ್ತು. ಆದರೆ, ಪೈಲಟ್ ಎರಡು ವಿಮಾನ ನಿಲ್ದಾಣಗಳಲ್ಲಿ ಒಂದರಲ್ಲಿ ಇಳಿಸಲು ಕೂಡ ಇಚ್ಛೆ ವ್ಯಕ್ತಪಡಿಸಲಿಲ್ಲ’’ ಎಂದು ಭಾರತೀಯ ವಾಯು ಪಡೆ ಹೇಳಿದೆ. 
ಬಾಂಬ್ ಭೀತಿಯನ್ನು ನಿರ್ಲಕ್ಷಿಸುವಂತೆ ಟೆಹ್ರಾನ್ ತಿಳಿಸಿದ ಬಳಿಕ ವಿಮಾನ ಚೀನಾದ ತನ್ನ ಗಮ್ಯದತ್ತ ಪ್ರಯಾಣ ಮುಂದುವರಿಸಿತು ಎಂದು ಹೇಳಿಕೆ ತಿಳಿಸಿದೆ. 
‘‘ನಾಗರಿಕ ವಿಮಾನ ಯಾನ ಸಚಿವಾಲಯ (ಎಂಒಸಿಎ) ಹಾಗೂ ನಾಗರಿಕ ವಿಮಾನ ಯಾನ ಭದ್ರತಾ ಬ್ಯುರೊ (ಬಿಸಿಎಎಸ್) ನಿಗದಿಪಡಿಸಿದ ಕಾರ್ಯ ವಿಧಾನದಂತೆ ಭಾರತೀಯ ವಾಯು ಪಡೆ (ಐಎಎಫ್) ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಇರಾನ್‌ನ ವಿಮಾನ ಭಾರತೀಯ ವಾಯು ಪ್ರದೇಶದಲ್ಲಿ ಇರುವಾಗ ವಾಯು ಪಡೆ ನಿಕಟ ರಾಡರ್ ಕಣ್ಗಾವಲು ಇರಿಸಿತ್ತು’’ ಎಂದು ಅದು ಹೇಳಿದೆ. 

ಈ ನಡುವೆ ಇರಾನ್‌ನ ವಿಮಾನ ಯಾನ ಸಂಸ್ಥೆ ‘ಮಹಾನ್ ಏರ್’ನ ಟೆಹ್ರಾನ್‌ನಿಂದ ಗುವಾಂಗ್‌ಝೌಗೆ ತೆರಳುತ್ತಿದ್ದ ವಿಮಾನ ಚೀನಾದ ತನ್ನ ಗಮ್ಯವನ್ನು ಸುರಕ್ಷಿತವಾಗಿ ಹಾಗೂ ಸರಿಯಾದ ಸಮಯಕ್ಕೆ ತಲುಪಿದೆ ಎಂದು ಇರಾನ್ ಅರೆ ಸರಕಾರಿ ಸಂಸ್ಥೆ ಐಎಸ್‌ಎನ್‌ಎ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News