ಪತಿಯ ಆದಾಯ ವಿವರ ಕೋರಿ ಆರ್​ಟಿಐ ಮೊರೆ ಹೋದ ಪತ್ನಿ: ಮಾಹಿತಿ ನೀಡುವಂತೆ ಆದೇಶ

Update: 2022-10-03 07:51 GMT

ಹೊಸದಿಲ್ಲಿ: ಮಹಿಳೆಯೊಬ್ಬರು ತಮ್ಮ ಪತಿಯ ಆದಾಯದ ಕುರಿತ ವಿವರಗಳನ್ನು ಮಾಹಿತಿ ಹಕ್ಕುಗಳ ಕಾಯಿದೆ (RTI) ಅಡಿ ಅರ್ಜಿ ಸಲ್ಲಿಸಿ ಪಡೆದುಕೊಂಡ ವಿದ್ಯಮಾನ ವರದಿಯಾಗಿದೆ.

ಕೇಂದ್ರ ಮಾಹಿತಿ ಆಯೋಗವು ತನ್ನ ಇತ್ತೀಚಿನ ಆದೇಶದಲ್ಲಿ ಮಹಿಳೆಗೆ ಆಕೆಯ ಪತಿಯ ಆದಾಯದ ವಿವರಗಳು, ಅಂದರೆ ತೆರಿಗೆ ಅನ್ವಯಿಸುವ ನಿವ್ವಳ ಆದಾಯ/ಒಟ್ಟು ಆದಾಯದ ಮಾಹಿತಿಯನ್ನು 15 ದಿನಗಳೊಳಗೆ ನೀಡುವಂತೆ ಸೂಚಿಸಿದೆ.

ಸಂಜು ಗುಪ್ತ ಎಂಬ ಮಹಿಳೆ ಆರಂಭದಲ್ಲಿ ಸಲ್ಲಿಸಿದ್ದ ಆರ್​ಟಿಐ ಅರ್ಜಿಗೆ ಆದಾಯ ತೆರಿಗೆ ಇಲಾಖೆಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ, ಮಾಹಿತಿ ನೀಡಲು ನಿರಾಕರಿಸಿದ್ದರಲ್ಲದೆ ಮಹಿಳೆಯ ಪತಿ ಆದಾಯ ಕುರಿತ ಮಾಹಿತಿ ನೀಡಲು ಒಪ್ಪಿಲ್ಲ ಎಂಬ ಕಾರಣ ನೀಡಿದ್ದರು.

ಇದರ ಬೆನ್ನಲ್ಲೇ ಮಹಿಳೆ ಮೊದಲ ಮೇಲ್ಮನವಿ ಪ್ರಾಧಿಕಾರ (ಫಸ್ಟ್ ಅಪೆಲ್ಲೇಟ್ ಅಥಾರಿಟಿ)ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಪ್ರಾಧಿಕಾರ ಕೂಡ ಆದಾಯ ತೆರಿಗೆ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ಆದೇಶವನ್ನು ಎತ್ತಿ ಹಿಡಿದಿದ್ದರಿಂದ ಸಂಜು ಗುಪ್ತಾ ಅವರು ಕೇಂದ್ರ ಮಾಹಿತಿ ಆಯೋಗಕ್ಕೆ ಇನ್ನೊಂದು ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಮಾಹಿತಿ ಆಯೋಗವು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‍ಗಳ ಹಿಂದಿನ ಕೆಲ ಆದೇಶಗಳು ಹಾಗೂ ತೀರ್ಪುಗಳನ್ನು ಗಣನೆಗೆ ತೆಗೆದುಕೊಂಡು ತನ್ನ ಆದೇಶವನ್ನು ಸೆಪ್ಟೆಂಬರ್ 19 ರಂದು ನೀಡಿದೆ ಹಾಗೂ ಆದಾಯ ತೆರಿಗೆ ಇಲಾಖೆಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಈ ಆದೇಶ ದೊರೆತ 15 ದಿನಗಳೊಳಗೆ ಆಕೆಯ ಪತಿಯ ಆದಾಯ ಕುರಿತ ಮಾಹಿತಿ ನೀಡಬೇಕೆಂದು ಸುಚಿಸಿದೆ.

ಇದನ್ನೂ ಓದಿ: ಅಕ್ಕಿ ಅಕ್ರಮ ಸಾಗಾಟ ಸೇರಿ 30ಕ್ಕೂ ಹೆಚ್ಚು ಪ್ರಕರಣ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಗಡಿಪಾರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News