ಭಾರತೀಯ ವಾಯುಪಡೆಗೆ ದೇಶೀಯ ನಿರ್ಮಿತ ‘ಪ್ರಚಂಡ’ ಲಘು ಯುದ್ಧ ಹೆಲಿಕಾಪ್ಟರ್‌ ಸೇರ್ಪಡೆ

Update: 2022-10-03 15:29 GMT
Photo:twitter

ಹೊಸದಿಲ್ಲಿ,ಅ.3: ಸ್ವದೇಶಿ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್(ಎಲ್‌ಸಿಎಚ್)ಗಳ ಮೊದಲ ತಂಡವನ್ನು ಸೋಮವಾರ ಸೇರ್ಪಡೆಗೊಳಿಸಿಕೊಳ್ಳುವ ಮೂಲಕ ಭಾರತೀಯ ವಾಯುಪಡೆಯು ತನ್ನ ಯುದ್ಧಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ‘ಪ್ರಚಂಡ’ ಎಂದು ಹೆಸರಿಸಲಾಗಿರುವ ಈ ಹೆಲಿಕಾಪ್ಟರ್ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದು ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಮಹತ್ವದ ಸಂದರ್ಭವಾಗಿದೆ ಎಂದು ಜೋಧಪುರದಲ್ಲಿ ನಡೆದ ‘ಪ್ರಚಂಡ’ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು. ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಉಪಸ್ಥಿತರಿದ್ದರು.

ಎಚ್‌ಎಎಲ್ ನಿರ್ಮಿಸಿರುವ ಎಲ್‌ಸಿಎಚ್‌ನ್ನು ಪ್ರಾಥಮಿಕವಾಗಿ ಎತ್ತರದ ಪ್ರದೇಶಗಳಲ್ಲಿ ನಿಯೋಜಿಸಲು ವಿನ್ಯಾಸಗೊಳಿಸಲಾಗಿದೆ.

ಎಲ್‌ಸಿಎಚ್ ಮುಂದಿನ ಹಲವಾರು ವರ್ಷಗಳ ಕಾಲ ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ ದಾಳಿ ಹೆಲಿಕಾಪ್ಟರ್‌ಗಳ ವ್ಯೆಹ ರಚನೆಗೆ ತಳಹದಿಯಾಗಿರಲಿದೆ. 5.8 ಟನ್ ಭಾರದ ಅವಳಿ ಇಂಜಿನ್‌ಗಳನ್ನು ಹೊಂದಿರುವ ಎಲ್‌ಸಿಎಚ್ ಈಗಾಗಲೇ ವಿವಿಧ ಶಸ್ತ್ರಾಸ್ತ್ರ ಪ್ರಯೋಗ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಅಧಿಕಾರಿಗಳು ತಿಳಿಸಿದರು.

ಇದಕ್ಕಿಂತ ದೊಡ್ಡದಾದ ಮತ್ತು ಬಹುಶಃ ಹೆಚ್ಚು ಸಾಮರ್ಥ್ಯದ ಅಮೆರಿಕ ನಿರ್ಮಿತ ಅಪಾಚೆ ಹೆಲಿಕಾಪ್ಟರ್‌ಗಳನ್ನು ನಾವು ಹೊಂದಿದ್ದೇವಾದರೂ ವಿಶೇಷವಾಗಿ ಎತ್ತರದ ಪ್ರದೇಶಗಳಲ್ಲಿ ಗಣನೀಯ ಪೇಲೋಡ್ ಸಾಗಿಸಬಲ್ಲ ಈ ಎಲ್‌ಸಿಎಚ್ ನಿರ್ದಿಷ್ಟ ಪಾತ್ರವನ್ನು ವಹಿಸಲಿದೆ.ಇದನ್ನು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದರು.

 ಹೆಲಿಕಾಪ್ಟರ್‌ನ್ನು ಲಡಾಖ್ ಪ್ರದೇಶದಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದು, ಚೀನಿ ಡ್ರೋನ್‌ಗಳನ್ನು ಮತ್ತು ನೆಲದಲ್ಲಿ ಚಲಿಸುವ ಟ್ಯಾಂಕ್‌ಗಳನ್ನು ಧ್ವಂಸಗೊಳಿಸುವ ತನ್ನ ಸಾಮರ್ಥ್ಯವನ್ನು ಅದು ಸಾಬೀತುಗೊಳಿಸಿದೆ.

95 ಹೆಲಿಕಾಪ್ಟರ್‌ಗಳು ಭಾರತೀಯ ಸೇನೆಯಲ್ಲಿ ಮತ್ತು 65 ಹೆಲಿಕಾಪ್ಟರ್‌ಗಳು ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸಲಿವೆ. ಬೆರಳೆಣಿಕೆಯಷ್ಟು ಈ ಎಲ್‌ಸಿಎಚ್‌ಗಳು ಈಗಾಗಲೇ ನಿಯೋಜನೆಯಲ್ಲಿವೆ.

ಎಲ್‌ಸಿಎಚ್ ಸುಧಾರಿತ ಲಘು ಹೆಲಿಕಾಪ್ಟರ್ ಧ್ರುವದೊಂದಿಗೆ ಹೋಲಿಕೆಗಳನ್ನು ಹೊಂದಿದೆ. ಹಲವಾರು ರಹಸ್ಯ ವೈಶಿಷ್ಟಗಳು,ಶಸ್ತ್ರಸಜ್ಜಿತ ರಕ್ಷಣಾ ವ್ಯವಸ್ಥೆಗಳು,ರಾತ್ರಿ ದಾಳಿ ಸಾಮರ್ಥ್ಯ,ತುರ್ತು ಸಂದರ್ಭಗಳಿಗಾಗಿ ಯೋಗ್ಯ ಲ್ಯಾಂಡಿಂಗ್ ಗೇರ್ ಇತ್ಯಾದಿಗಳು ನೂತನ ಹೆಲಿಕಾಪ್ಟರ್‌ನಲ್ಲಿ ಅಡಕವಾಗಿವೆ.

ಪ್ರಚಂಡ ಹೆಲಿಕಾಪ್ಟರ್‌ನ್ನು ಎತ್ತರದ ಪ್ರದೇಶಗಳಲ್ಲಿಯ ಬಂಕರ್‌ಗಳನ್ನು ಧ್ವಂಸಗೊಳಿಸಲು,ಅರಣ್ಯಗಳು ಮತ್ತು ನಗರ ಪ್ರದೇಶಗಳಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಗಳಿಗೆ ಮತ್ತು ಪದಾತಿ ಪಡೆಗಳ ಬೆಂಬಲಕ್ಕಾಗಿಯೂ ನಿಯೋಜಿಸಬಹುದಾಗಿದೆ.

ಎಲ್‌ಸಿಎಚ್‌ನ್ನು ಶತ್ರುಗಳ ನಿಧಾನಗತಿಯ ವಿಮಾನಗಳು ಮತ್ತು ದೂರ ನಿಯಂತ್ರಿತ ವಿಮಾನಗಳ ವಿರುದ್ಧವೂ ಬಳಸಬಹುದಾಗಿದೆ. ವಾಯುಪಡೆ ಮತ್ತು ಭಾರತಿಯ ಸೇನೆಯ ಕಾರ್ಯಾಚರಣೆಗಳ ಅಗತ್ಯವನ್ನು ಪೂರೈಸಲು ಇದು ಪ್ರಬಲ ವೇದಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News