ಲಕ್ನೋ ಲುಲು ಮಾಲ್‌ನಲ್ಲಿ ನವರಾತ್ರಿ ಸಂಭ್ರಮ: ನಮಾಝ್‌ ಮಾಡಿದವರ ಬಂಧನವನ್ನು ಪ್ರಶ್ನಿಸಿದ ನೆಟ್ಟಿಗರು

Update: 2022-10-03 12:53 GMT
PTI
 

ಹೊಸದಿಲ್ಲಿ‌: ಅರಬ್ ರಾಷ್ಟ್ರ ಯುಎಇಯ ದುಬೈ ನಗರದ ಲುಲು ಮಾಲ್ ಒಂದರಲ್ಲಿ ಹಿಂದೂಗಳು ನವರಾತ್ರಿ ಹಬ್ಬವನ್ನು ಆಚರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಿದೆ. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇತರೆ ಧರ್ಮದ ಆಚರಣೆ, ಸಂಭ್ರಮಗಳಿಗೆ ಮುಕ್ತ ಅವಕಾಶ ಇರುವುದನ್ನು ಹಲವು ನೆಟ್ಟಿಗರು ಅಭಿನಂದಿಸಿದ್ದಾರೆ.  ಅಂತೆಯೇ ನಮಾಝ್‌ ಮಾಡಿದ್ದಕ್ಕಾಗಿ ವಿವಾದದ ಕೇಂದ್ರಬಿಂದುವಾಗಿದ್ದ ಲಕ್ನೋ ಲುಲು ಮಾಲ್‌ ನಲ್ಲೂ ನವರಾತ್ರಿ ಆಚರಣೆ ಮಾಡಿದ್ದರ ಕುರಿತು ಹಲವು ಪ್ರಶ್ನೆಗಳನ್ನೆತ್ತಿದ್ದಾರೆ.

ಇದೇ ಲಕ್ನೋದ ಲುಲು ಮಾಲ್‌ ನಲ್ಲಿ ನಮಾಝ್ ಮಾಡಿದವರನ್ನು ಬಂಧಿಸಿರುವ ಕುರಿತಂತೆ ಹಲವರು ಪ್ರಶ್ನೆ ಎತ್ತಿದ್ದಾರೆ. ದುಬೈಯ ಲುಲು ಮಾಲ್ ನಲ್ಲಿ ನವರಾತ್ರಿ ಸಂಭ್ರಮಕ್ಕೆ ಅವಕಾಶ ಕೊಟ್ಟಿದ್ದಾರೆ, ಆದರೆ ಭಾರತದಲ್ಲಿ ನಮಾಝ್ ಮಾಡಿದವರನ್ನು ಬಂಧಿಸಲಾಗಿದೆ ಎಂದು ನೆಟ್ಟಿಗರು ಗಮನ ಸೆಳೆದಿದ್ದಾರೆ. 

ಈ ಕುರಿತ ವಿಡಿಯೋವನ್ನು ಹಂಚಿಕೊಂಡು, "ಜುಲೈನಲ್ಲಿ, ಭಾರತದ ಲಕ್ನೋದಲ್ಲಿರುವ ಲುಲು ಶಾಪಿಂಗ್ ಮಾಲ್‌ನ ನೆಲಮಾಳಿಗೆಯಲ್ಲಿ ನಮಾಝ್ ಮಾಡಿದ 4 ಮುಸ್ಲಿಮರನ್ನು ಬಂಧಿಸಲಾಯಿತು;  ಅಕ್ಟೋಬರ್‌ನಲ್ಲಿ, ಯುಎಇಯ ದುಬೈನ ಲುಲು ಶಾಪಿಂಗ್ ಮಾಲ್‌ನಲ್ಲಿ ಹಿಂದೂಗಳು ದಾಂಡಿಯಾ ನೃತ್ಯ ಮಾಡುವ ಮೂಲಕ ನವರಾತ್ರಿಯನ್ನು ಆಚರಿಸುತ್ತಿದ್ದಾರೆ. (ಆದರೂ)  ಭಾರತ ಸೆಕ್ಯುಲರ್ ಎನ್ನುತ್ತಾರೆ!" ಎಂದು ಪ್ರೊಫೆಸರ್ ಅಶೋಕ್ ಸ್ವೈನ್ ಟ್ವೀಟ್ ಮಾಡಿದ್ದಾರೆ.

ಇನ್ನೂ ಹಲವರು ಲಕ್ನೋ ಲುಲು ಮಾಲ್‌ ನ ಟ್ವೀಟ್‌ ಮತ್ತು ಕಾರ್ಯಕ್ರಮದ ಫೋಟೊಗಳನ್ನು ಟ್ವೀಟ್‌ ಮಾಡಿದ್ದು, ನ್ಯಾಯದ ದ್ವಿಮುಖ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News