'ರಾವಣ ಪಾತ್ರ ಮುಸ್ಲಿಮನಂತೆ ಕಾಣುತ್ತಿದೆ': ರಾಮಾಯಣ ಆಧಾರಿತ ಆದಿಪುರುಷ್‌ ಚಿತ್ರದ ವಿರುದ್ಧ ಸಾಮಾಜಿಕ ತಾಣದಲ್ಲಿ ಆಕ್ರೋಶ

Update: 2022-10-03 15:14 GMT
Photo: Twitter

ಮುಂಬೈ: ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟನೆಯ ʼಆದಿಪುರುಷ್‌ʼ ಚಿತ್ರದ ಮೊದಲ ಟೀಸರ್‌ ಬಿಡುಗಡೆಯಾಗಿದ್ದು, ಬಹುನಿರೀಕ್ಷಿತ ಚಿತ್ರದ ಮೊದಲ ಟೀಸರಿನಲ್ಲೇ ಅಭಿಮಾನಿಗಳಿಗೆ ಭಾರೀ ನಿರಾಸೆ ಆಗಿದೆ.

ರಾಮಾಯಣದ ಕತೆಯನ್ನು ಆಧರಿಸಿರುವ ಈ ಚಿತ್ರಕ್ಕೆ, ʼಥಾಣಾಜಿʼ ನಿರ್ದೇಶಕ ಓಂ ರಾವತ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಪ್ರಭಾಸ್‌ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಸೈಫ್‌ ಅಲಿ ಖಾನ್‌ ರಾವಣನ ಪಾತ್ರದಲ್ಲಿ ಹಾಗೂ ಕೃತಿ ಸನೋನ್‌ ಸೀತಾ ಮತ್ತು ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರತಂಡವು ಬಿಡುಗಡೆ ಮಾಡಿರುವ ಟೀಸರಿನಲ್ಲಿ ವಿಎಫ್‌ಎಕ್ಸ್‌ ತೀರಾ ಕಳಪೆಯಾಗಿದೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ದೃಶ್ಯ ರೂಪದಲ್ಲಿ ತರುವಾಗ ಅದರ ಬಗ್ಗೆ ತಾವು ಅತೀವ ನಿರೀಕ್ಷೆ ಇಟ್ಟುಕೊಂಡಿದ್ದೆವು, ಇದು ಪೊಗೊ ಅಥವಾ ಕಾರ್ಟೂನ್‌ ನೆಟ್‌ವರ್ಕ್‌ ಅಲ್ಲಿ ಪ್ರಸಾರ ಮಾಡುವ ಮಕ್ಕಳ ಕಾರ್ಟೂನ್‌ ಚಿತ್ರಗಳಂತೆ ಇದೆ ಎಂದು ಟೀಕಿಸಿದ್ದಾರೆ. ಕೇವಲ ಮೊಬೈಲ್‌ ಗೇಮ್‌ ಆದ ಟೆಂಪಲ್‌ ರನ್‌ ಗ್ರಾಫಿಕ್ಸ್‌ ಆದಿಪುರುಷ್‌ ಗಿಂತಲೂ ಅದ್ಭುತವಾಗಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಅದರಲ್ಲೂ, ರಾವಣನ ಹಾಗೂ ಹನುಮಾನ್‌ ಪಾತ್ರದ ವೇಷಭೂಷಣದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಸೈಫ್ ಅಲಿ ಖಾನ್ ರಾವಣನಿಗಿಂತ ಮೊಘಲ್ ದೊರೆ ತೈಮೂರ್ ಅಥವಾ ಔರಂಗಝೇಬ್‌ ನಂತೆ ಕಾಣುತ್ತಾರೆ ಎಂದು ಅನೇಕ ನೆಟ್ಟಿಗರು ಪ್ರತಿಕ್ರಯಿಸಿದ್ದಾರೆ. ಆಧುನಿಕ ರೀತಿಯಲ್ಲಿ ಇರುವ ರಾವಣ (ಸೈಫ್‌) ಕೇಶ ವಿನ್ಯಾಸದ ಬಗ್ಗೆಯೂ ತಕರಾರು ಎದ್ದಿದೆ. ವಾಲ್ಮೀಕಿ ರಾಮಾಯಣ ಅಥವಾ ಇನ್ಯಾವುದೇ ರಾಮಾಯಣದಲ್ಲಿ ಕಟ್ಟಿಕೊಟ್ಟಿರುವ ರಾವಣನ ಕಲ್ಪನೆಗೂ ಆದಿಪುರುಷ ಚಿತ್ರದಲ್ಲಿ ಕಂಡು ಬರುವ ರಾವಣನಿಗೂ ಯಾವುದೇ ಸಂಬಂಧವಿಲ್ಲ ಎಂದು ಟೀಕಿಸಿದ್ದಾರೆ. ರಾವಣ ಕಥಾ ಪಾತ್ರವನ್ನು ಮುಸ್ಲಿಂ ರೀತಿಯಲ್ಲಿ ಬಿಂಬಿಸಲಾಗಿದೆ ಎನ್ನುವುದು ನೆಟ್ಟಿಗರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

T Series ಮತ್ತು Retrophiles ಜಂಟಿಯಾಗಿ ನಿರ್ಮಿಸಿದ ಆದಿಪುರುಷ, IMAX ಮತ್ತು 3D ಯಲ್ಲಿ ಜನವರಿ 12, 2023 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News