​ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ 200 ರೈಲು ನಿಲ್ದಾಣಗಳ ಉನ್ನತೀಕರಣ: ರೈಲ್ವೆ ಸಚಿವ

Update: 2022-10-03 16:53 GMT
PHOTO: PTI

ಔರಂಗಾಬಾದ್ (ಮಹಾರಾಷ್ಟ್ರ),ಅ.3: ದೇಶಾದ್ಯಂತದ 200 ರೈಲು ನಿಲ್ದಾಣಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಸೋಮವಾರ ಇಲ್ಲಿ ತಿಳಿಸಿದರು.ಇಲ್ಲಿಯ ರೈಲು ನಿಲ್ದಾಣದಲ್ಲಿ ಬೋಗಿ ನಿರ್ವಹಣೆ ಕಾರ್ಖಾನೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು,47 ರೈಲು ನಿಲ್ದಾಣಗಳಿಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು,32 ನಿಲ್ದಾಣಗಳಲ್ಲಿ ಕಾಮಗಾರಿಗಳು ಆರಂಭಗೊಂಡಿವೆ ಎಂದರು.

ಸರಕಾರವು 200 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಮಾಸ್ಟರ್ ಪ್ಲಾನ್ ರೂಪಿಸಿದೆ. ನಿಲ್ದಾಣಗಳಲ್ಲಿ ಓವರ್ಹೆಡ್ ಸ್ಥಳಾವಕಾಶಗಳನ್ನು ಸೃಷ್ಟಿಸಲಾಗುವುದು ಮತ್ತು ಇವು ಕಾಯುವ ಲೌಂಜ್ಗಳು, ಫುಡ್‌ಕೋರ್ಟ್‌ ಗಳು,ಮಕ್ಕಳಿಗಾಗಿ ಮನೋರಂಜನೆ ಸೌಲಭ್ಯಗಳು ಸೇರಿದಂತೆ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರಲಿವೆ ಎಂದ ಅವರು,ರೈಲು ನಿಲ್ದಾಣಗಳು ಪ್ರಾದೇಶಿಕ ಉತ್ಪನ್ನಗಳಿಗೆ ಮಾರಾಟ ವೇದಿಕೆಯಾಗಿಯೂ ಕಾರ್ಯ ನಿರ್ವಹಿಸಲಿವೆ ಎಂದರು.ವಂದೇ ಭಾರತ ರೈಲುಗಳ ತಯಾರಿಕೆಯಲ್ಲಿ ಮಹಾರಾಷ್ಟ್ರದ ಮರಾಠವಾಡಾ ಪ್ರದೇಶದ ಕೊಡುಗೆಯ ಕುರಿತು ಮಾತನಾಡಿದ ವೈಷ್ಣವ,ಭವಿಷ್ಯದಲ್ಲಿ ದೇಶವು 400 ವಂದೇ ಭಾರತ ರೈಲುಗಳನ್ನು ಹೊಂದಿರಲಿದೆ ಮತ್ತು ಈ ಪೈಕಿ 100 ರೈಲುಗಳು ಮರಾಠವಾಡಾದ ಲಾತೂರಿನಲ್ಲಿಯ ಕೋಚ್ ಫ್ಯಾಕ್ಟರಿಯಲ್ಲಿ ತಯಾರಾಗಲಿವೆ. ಇದಕ್ಕಾಗಿ ಕಾರ್ಖಾನೆಯಲ್ಲಿ ಅಗತ್ಯ ಬದಲಾವಣೆಗಳನ್ನು ಈಗಾಗಲೇ ಮಾಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News