ಗಾಂಧೀಜಿ ಪ್ರಪಂಚ ಎಲ್ಲಾ ತಾರತಮ್ಯದಿಂದ ಮುಕ್ತ, ಸಮಾನತೆ ಆಧಾರಿತ: ಮಾಹೆ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್

Update: 2022-10-03 16:18 GMT

ಉಡುಪಿ, ಅ.3: ಗಾಂಧೀಜಿ ಅವರ ಪ್ರಾಪಂಚಿಕ ದೃಷ್ಟಿಕೋನ ಹಾಗೂ ಪ್ರಪಂಚ, ಅದು ಜಾತಿ, ಧರ್ಮ, ಬಣ್ಣ, ಜನಾಂಗ ಇತ್ಯಾದಿ ತಾರತಮ್ಯದಿಂದ ಮುಕ್ತವಾದ ಮತ್ತು ಶಾಂತಿ, ಸಮಾನತೆ, ಅಹಿಂಸೆ ಮತ್ತು ಸಹಿಷ್ಣುತೆಯ ಮೇಲೆ ಆಧಾರಿತವಾದುದು ಎಂದು ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜುಕೇಷನ್(ಮಾಹೆ) ಕುಲಪತಿ ಲೆ.ಜ.ಡಾ.ಎಂ.ಡಿ. ವೆಂಕಟೇಶ್ ಅಭಿಪ್ರಾಯ ಪಟ್ಟಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್ ರವಿವಾರ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮಹಾತ್ಮಗಾಂಧಿ ಅವರು ಆದರ್ಶಪ್ರಾಯವಾದ ಜೀವನ ನಡೆಸಿದವರು ಹಾಗೂ ಅವರ ಆದರ್ಶದ ಒಂದು ಭಾಗ ವನ್ನು ನಾವು ಅನುಸರಿಸಿದರೂ ಜಗತ್ತು ಉತ್ತಮವಾಗಿರುತ್ತದೆ.ಅವರ ಸ್ಪೂರ್ತಿದಾಯಕ ನಾಯಕತ್ವ ಹಾಗೂ ಅನುಕರಣೀಯ ಸಾಮೂಹಿಕ ಚಳವಳಿ ಮತ್ತು ಸತ್ಯಾಗ್ರಹಗಳಿಂದಲೇ ದೇಶ ಸ್ವಾತಂತ್ರ್ಯ ಪಡೆಯಿತು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಗಧ ವಿವಿಯ ಪ್ರಾಧ್ಯಾಪಕ ಪ್ರೊ.ಅಶೋಕ್‌ಕುಮಾರ್ ಸಿನ್ಹಾ ಅವರು ಸಮಾನ ಮತ್ತು ಸುಸ್ಖಿರ ಅಭಿವೃದ್ಧಿ ಆಧಾರಿತ ಗಾಂಧಿಯವರ ಅರ್ಥಶಾಸ್ತ್ರದ ಅಗತ್ಯವನ್ನು ಒತ್ತಿಹೇಳಿದರು. ದುರಾಸೆ ಆಧಾರಿತ ಆರ್ಥಿಕತೆಗಿಂತ, ಅಗತ್ಯ ಆಧಾರಿತ ಆರ್ಥಿಕತೆ ರಾಷ್ಟ್ರದ ತಾತ್ವಿಕ ಆಧಾರ ವಾಗಿರಬೇಕು ಎಂದರು.

ಮತ್ತೊಬ್ಬ ಮುಖ್ಯ ಅತಿಥಿ ಡಾ.ಶೋಭಾ ಕಾಮತ್, ಗಾಂಧಿ ಅವರ ತತ್ವಗಳನ್ನು ಕಲೆಯೊಂದಿಗೆ ಸಮೀಕರಿಸಿ ಮಾತನಾಡಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ ಹಿರೇಗಂಗೆ ಅವರೂ ಮಾತನಾಡಿದರು. 

ಸಂಸ್ಥೆಯ ವಿದ್ಯಾರ್ಥಿಗಳು ಸಂಗೀತ (ಶ್ರಾವ್ಯಬಾಸ್ರಿ), ನೃತ್ಯ (ಅಪೂರ್ವ ಕೆ.ಎಸ್.,ಶಿಖಾರಾಣಾ), ವರ್ಣಚಿತ್ರ (ಅಪರ್ಣಪರಮೇಶ್ವರನ್) ಹಾಗೂ ಚಲನಚಿತ್ರ (ಸಂಪದ ಭಾಗವತ್) ಮೂಲಕ ಗಾಂಧಿ ವಂದನೆಯನ್ನು ಆಯೋಜಿಸಿದರು. ಸಂಸ್ಥೆ ವಿದ್ಯಾರ್ಥಿಗಳು ನಡೆಸಿದ ವಿವಿದ ಚಟುವಟಿಕೆಗಳಲ್ಲಿ ವಿಜೇತರಾದ ಅಕಾಡೆಮಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕೊನೆಯಲ್ಲಿ ಮಣಿಪಾಲದ ತಪೋವನ ಸಹಯೋಗದಲ್ಲಿ ಧಾರವಾಡದ ಗೊಂಬೆಮನೆ ತಂಡದವರಿಂದ ಮಹಾತ್ಮ ಗಾಂಧಿ ಅವರ ಕುರಿತ ತೊಗಲುಗೊಂಬೆ ನಾಟಕ ಪ್ರದರ್ಶನಗೊಂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News