ಎಸ್‌ಡಿಪಿಐ ಹಾಗೂ ಪಿಎಫ್‌ಐ ನಡುವೆ ಯಾವುದೇ ಸಂಬಂಧ ಕಂಡುಬಂದಿಲ್ಲ: ಚುನಾವಣಾ ಆಯೋಗ

Update: 2022-10-03 17:03 GMT
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (indiatoday.in)

ಹೊಸದಿಲ್ಲಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಡುವೆ ಯಾವುದೇ ಸಂಬಂಧ ಕಂಡುಬಂದಿಲ್ಲ ಎಂದು ಚುನಾವಣಾ ಆಯೋಗವು ಹೇಳಿದೆ ಎಂದು Indiatoday.in ವರದಿ ಮಾಡಿದೆ.

ಸೆಪ್ಟಂಬರ್ 28 ರಂದು ಕೇಂದ್ರ ಸರ್ಕಾರವು ಭದ್ರತೆ ಮತ್ತು ಭಯೋತ್ಪಾದಕ ಬೆದರಿಕೆಗಳನ್ನು ಉಲ್ಲೇಖಿಸಿ, PFI ಮತ್ತು ಅದರ ಸಹೋದರ ಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿತು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಒಟ್ಟು ಒಂಬತ್ತು ಸಂಸ್ಥೆಗಳನ್ನು "ಕಾನೂನುಬಾಹಿರ" ಎಂದು ಘೋಷಿಸಲಾಗಿತ್ತು. ಆದರೆ ಪಿಎಫ್‌ಐನ ರಾಜಕೀಯ ಘಟಕವಾದ ಎಸ್‌ಡಿಪಿಐ ಈ ನಿಷೇಧದಿಂದ ಪಾರಾಗಿದೆ.

ಎಸ್‌ಡಿಪಿಐ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದು, ಇಲ್ಲಿಯವರೆಗೆ ಪಿಎಫ್‌ಐ ಮತ್ತು ಎಸ್‌ಡಿಪಿಐ ನಡುವೆ ಯಾವುದೇ ಕೊಂಡಿಯಿರುವುದಾಗಿ ಪತ್ತೆಯಾಗಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

“ಪಿಎಫ್‌ಐ ವಿರುದ್ಧದ ಕ್ರಮದ ಬಗ್ಗೆ ನಮಗೆ ತಿಳಿದಿದೆ. SDPI ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದೆ. ಇಲ್ಲಿಯವರೆಗೆ PFI ಮತ್ತು SDPI ನಡುವೆ ಯಾವುದೇ ಸಂಪರ್ಕ ಕಂಡುಬಂದಿಲ್ಲ. ಅವರ ಕಡೆಯಿಂದ ಯಾವುದೇ ಲೋಪವಿಲ್ಲ” ಎಂದು ಸಿಇಸಿ ರಾಜೀವ್ ಕುಮಾರ್ ಹೇಳಿದ್ದಾರೆ.

SDPI ಅನ್ನು ಜೂನ್ 21, 2009 ರಂದು ರಚಿಸಲಾಗಿದ್ದು, ಇದನ್ನು ಏಪ್ರಿಲ್ 13, 2010 ರಂದು ಭಾರತದ ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾಗಿದೆ. ಇಲ್ಲಿಯವರೆಗೆ, ಕೇರಳ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ , ಆಂಧ್ರಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಮಧ್ಯ ಪ್ರದೇಶದ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಎಸ್‌ಡಿಪಿಐ ಸದಸ್ಯ ಸ್ಥಾನವನ್ನು ಗೆದ್ದಿದೆ.

ಕೃಪೆ: indiatoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News