ಡಿ.23ರಿಂದ ಜನವರಿ 1ರವರೆಗೆ ಕರಾವಳಿ ಉತ್ಸವ: ಸಚಿವ ಸುನಿಲ್ ಕುಮಾರ್

Update: 2022-10-03 17:37 GMT

ಮಂಗಳೂರು, ಅ.3: ನಗರದ ತಣ್ಣೀರುಬಾವಿ ಕಡಲತಡಿಯಲ್ಲಿ ಡಿಸೆಂಬರ್ 23ರಿಂದ ಜನವರಿ 1ರವರೆಗೆ ಕರಾವಳಿ ಉತ್ಸವವನ್ನು ಆಚರಿಸಲಾಗುವುದು. ಅದಕ್ಕೆ ಅಗತ್ಯವಿರುವ ಉಪ ಸಮಿತಿಗಳ ರಚನೆ ಹಾಗೂ ಕಾರ್ಯಕ್ರಮದ ರೂಪುರೇಷಗಳನ್ನು ಸಿದ್ಧಪಡಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ  ಸುನಿಲ್ ಕುಮಾರ್ ಹೇಳಿದರು.

ದ.ಕ.ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಸೋಮವಾರ ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರಾವಳಿ ಉತ್ಸವಕ್ಕೆ ಸರಕಾರದ ಅನುದಾನ, ಖಾಸಗಿ ಪ್ರಾಯೋಜಕತ್ವ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ, ಬೀಚ್ ಉತ್ಸವ, ರಿವರ್ ಫೆಸ್ಟಿವಲ್ ಆಯೋಜನೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದ ಸಚಿವರು, ಕರಾವಳಿ ಉತ್ಸವವನ್ನು ಪ್ರಮುಖವಾಗಿ ಸಾಂಸ್ಕೃತಿಕವಾಗಿ ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾಗಿ ಆಯೋಜನೆ ಮಾಡಲಾಗುವುದು, ಈ ಬಗ್ಗೆ ಉಪ ಸಮಿತಿಗಳಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು. ಈ ಉತ್ಸವ ಯಶಸ್ವಿಯಾಗಲು ಈ ಹಿಂದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಅನುಭವ ಹಾಗೂ ಸಲಹೆ ಅಗತ್ಯ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ತಣ್ಣೀರು ಬಾವಿ ಕಡಲ ತೀರ ಪ್ರಧಾನ ವೇದಿಕೆಯನ್ನಾಗಿ ಕಾರ್ಯಕ್ರಮ ರೂಪಿಸಲಾಗುವುದು. ಅಲ್ಲಿಯೇ ಆಹಾರ ಮೇಳವನ್ನು ಆಯೋಜಿಸಲಾಗುವುದು. ಕದ್ರಿ ಪಾರ್ಕ್ ಸಹಿತ ಇತರೆ ಪ್ರಮುಖ ಸ್ಥಳಗಳಲ್ಲಿ ಉಪ ವೇದಿಕೆಗಳಿಗೆ ಅವಕಾಶ ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಕೋವಿಡ್ ಸೋಂಕಿನಿಂದಾಗಿ ಕಳೆದ ಎರಡು ವಷರ್ಗಳಿಂದ ಕರಾವಳಿ ಉತ್ಸವವನ್ನು ಹಮ್ಮಿಕೊಂಡಿಲ್ಲ. ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದರು.

ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಮನಪಾ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಡಿಸಿಪಿ. ಅಂಶುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News