ಅಧ್ಯಕ್ಷೀಯ ಚುನಾವಣೆಗೆ ಕಾಂಗ್ರೆಸ್‌ನಿಂದ ಮಾರ್ಗಸೂಚಿ ಬಿಡುಗಡೆ

Update: 2022-10-03 18:02 GMT
PHOTO: PTI

ಹೊಸದಿಲ್ಲಿ, ಅ. 3:  ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೋಮವಾರ ಚುನಾವಣಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಯಾವುದೇ ಅಭ್ಯರ್ಥಿಗೆ ಬೆಂಬಲ ನೀಡಲು ಬಯಸುವವರು ಮೊದಲು ತಮ್ಮ ಸಾಂಸ್ಥಿಕ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 

ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಅವರು ತಮ್ಮ ವೈಯುಕ್ತಿಕ ಸಾಮರ್ಥ್ಯದಿಂದ  ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿರುವ ಮಾರ್ಗಸೂಚಿ, ಗಣ್ಯರು ಮತ ಪತ್ರದ ಮೂಲಕ   ಯಾರೊಬ್ಬರನ್ನು  ಆಯ್ಕೆ ಮಾಡುವ ಮುಕ್ತತೆ ಹೊಂದಿದ್ದಾರೆ ಎಂದು ತಿಳಿಸಿದೆ.  
ಎಐಸಿಸಿ ಪ್ರಧಾನ ಕಾರ್ಯದಶಿಗಳು/ಉಸ್ತುವಾರಿಗಳು, ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷರು, ಕಾಂಗ್ರೆಸ್ ಶಾಸಕಾಂಗ ಪಕ್ಷ(ಸಿಎಲ್‌ಪಿ)ದ ನಾಯಕರು, ಮುಂಚೂಣಿ ಸಂಘಟನೆಗಳ ಮುಖ್ಯಸ್ಥರು, ಇಲಾಖೆಗಳ ಮುಖ್ಯಸ್ಥರು, ಘಟಕಗಳು ಹಾಗೂ ಎಲ್ಲ ಅಧಿಕೃತ ವಕ್ತಾರರು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪರ ಪ್ರಚಾರ ಮಾಡಬಾರದು ಎಂದು ಮಾರ್ಗಸೂಚಿ ತಿಳಿಸಿದೆ. 
ಮೊದಲು ತಮ್ಮ ಸಾಂಸ್ಥಿಕ ಹುದ್ದೆಗೆ ರಾಜೀನಾಮೆ ನೀಡಬೇಕು. ಅನಂತರ   ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬಹುದು ಎಂದು ಅದು ಹೇಳಿದೆ. 
ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಯ ಮತದಾನ ಅಕ್ಟೋಬರ್ ೧೭ರಂದು ನಡೆಯಲಿದೆ.   ಅಕ್ಟೋಬರ್ ೧೯ರಂದು ಮತ ಎಣಿಕೆ ನಡೆಯಲಿದೆ. ಫಲಿತಾಂಶ ಅದೇ ದಿನ ಘೋಷಣೆಯಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News