ಉತ್ತರ ಪ್ರದೇಶ: ಎಲ್‍ಇಡಿ ಟಿವಿ ಸ್ಫೋಟಗೊಂಡು ಬಾಲಕ ಮೃತ್ಯು

Update: 2022-10-05 01:55 GMT

ಗಾಝಿಯಾಬಾದ್: ಎಲ್‍ಇಡಿ ಟಿವಿ ಸ್ಫೋಟಗೊಂಡು ಹದಿನಾರು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್‍ನಲ್ಲಿ ನಡೆದಿದೆ.

ಬಾಲಕನ ತಾಯಿ, ಅತ್ತಿಗೆ ಹಾಗೂ ಸ್ನೇಹಿತ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಈ ಸ್ಫೋಟ ಎಷ್ಟು ತೀವ್ರವಾಗಿತ್ತು ಎಂದರೆ ಕಾಂಕ್ರೀಟ್ ಸ್ಲ್ಯಾಬ್ ಹಾಗೂ ಗೋಡೆಯ ಒಂದು ಭಾಗ ಸ್ಫೋಟದ ರಭಸಕ್ಕೆ ಕುಸಿದಿದೆ. ಇದು ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿಸಿತು. ಸ್ಫೋಟದಿಂದ ತೀವ್ರ ಗಾಯಗಳಾಗಿದ್ದ ಓಮೇಂದ್ರ ಬಳಿಕ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಟಿವಿಯ ಚೂರುಗಳು ಸಿಡಿದು ಬಾಲಕನ ಮುಖ, ಎದೆ, ಕುತ್ತಿಗೆಗೆ ಗಾಯವಾಗಿತ್ತು ಎಂದು ಹೇಳಿದ್ದಾರೆ.

ಮನೆಯಿಂದ ದೊಡ್ಡ ಸ್ಫೋಟದ ಸದ್ದು ಕೇಳಿಸಿತು ಎಂದು ನೆರೆಮನೆಯ ವಿನಿತಾ ಹೇಳಿದ್ದಾರೆ. "ಅಡುಗೆ ಮನೆ ಸಿಲಿಂಡರ್ ಒಡೆದಿರಬೇಕು ಎಂದುಕೊಂಡೆ. ನಾವೆಲ್ಲ ಹೊರಕ್ಕೆ ಓಡಿ ಬಂದೆವು. ಪಕ್ಕದ ಮನೆಯಿಂದ ದಟ್ಟ ಹೊಗೆ ಬರುವುದು ಕಾಣಿಸಿತು" ಎಂದು ಅವರು ವಿವರಿಸಿದರು. ಟಿವಿ ಸ್ಫೋಟಗೊಂಡಾಗ ಒಮೇಂದ್ರ, ಆತನ ತಾಯಿ, ಅತ್ತಿಗೆ ಹಾಗೂ ಆತನ ಸ್ನೇಹಿತ ಕರಣ್ ಆ ಕೊಠಡಿಯಲ್ಲಿದ್ದರು.

"ಸ್ಫೋಟ ಶಕ್ತಿಶಾಲಿಯಾಗಿತ್ತು ಹಾಗೂ ಇಡೀ ಮನೆ ಕಂಪಿಸಿತು. ಗೊಡೆಗಳು ಭಾಗಶಃ ಕುಸಿದವು" ಎಂದು ಮತ್ತೊಂದು ಕೊಠಡಿಯಲ್ಲಿದ್ದ ಮೋನಿಕಾ ಘಟನೆಯ ಬಗ್ಗೆ ವಿವರ ನೀಡಿದರು. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News