ಐಟಿ ಸಂಸದೀಯ ಸಮಿತಿಯ ಅಧ್ಯಕ್ಷ ಪದವಿ ಕಳೆದುಕೊಂಡ ಕಾಂಗ್ರೆಸ್

Update: 2022-10-05 03:53 GMT

ಹೊಸದಿಲ್ಲಿ: ಗೃಹ ವ್ಯವಹಾರಗಳು ಮತ್ತು ಮಾಹಿತಿ ತಂತ್ರಜ್ಞಾನದಂಥ ಪ್ರಮುಖ ಸಂಸದೀಯ ಸಮಿತಿಗಳು ಸೇರಿದಂತೆ ವಿರೋಧ ಪಕ್ಷಗಳಿಗೆ ಈ ಬಾರಿ ಯಾವುದೇ ಸಂಸದೀಯ ಸಮಿತಿಗಳ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಮಂಗಳವಾರ ಘೋಷಿಸಲಾದ ಹೊಸ ಸಮಿತಿಗಳಲ್ಲಿ ಈ ಹಿಂದೆ ಹೊಂದಿದ್ದ ಎರಡು ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು timesofindia.com ವರದಿ ಮಾಡಿದೆ.

ಇದೀಗ ಪ್ರಮುಖ ಆರು ಸಂಸದೀಯ ಸಮಿತಿಗಳಾದ ಗೃಹ, ಮಾಹಿತಿ ತಂತ್ರಜ್ಞಾನ, ವಿದೇಶಾಂಗ ವ್ಯವಹಾರ, ಹಣಕಾಸು ಮತ್ತು ಆರೋಗ್ಯ ಸಮಿತಿಗಳ ಅಧ್ಯಕ್ಷ ಸ್ಥಾನ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಕೈಯಲ್ಲಿದೆ.

ಗೃಹ ವ್ಯವಹಾರ ಕುರಿತ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ ನ ಅಭಿಷೇಕ್ ಮನು ಸಿಂಘ್ವಿ ಅವರ ಸ್ಥಾನಕ್ಕೆ ಬಿಜೆಪಿ ಸಂಸದ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಬೃಜ್‍ಲಾಲ್ ನೇಮಕಗೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಶಿ ತರೂರ್ ಹೊಂದಿದ್ದ ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿಗೆ ಶಿವಸೇನೆ ಸಂಸದ ಪ್ರತಾಪ್‍ ರಾವ್ ಜಾಧವ್ ಆಯ್ಕೆಯಾಗಿದ್ದಾರೆ.

ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸ್ಥಾಯಿ ಸಮಿತಿಯ ಅಧ್ಯಕ್ಷತೆ ಹೊಂದಿದ್ದ ತೃಣಮೂಲ ಕಾಂಗ್ರೆಸ್‍ಗೆ ಕೂಡಾ ಯಾವುದೇ ಸ್ಥಾಯಿ ಸಮಿತಿಯ ಮುಖ್ಯಸ್ಥ ಹುದ್ದೆ ಲಭಿಸಿಲ್ಲ. "ಟಿಎಂಸಿ ಸಂಸತ್‍ನಲ್ಲಿ ಮೂರನೇ ದೊಡ್ಡ ಪಕ್ಷವಾಗಿದ್ದು, ಎರಡನೇ ಅತಿದೊಡ್ಡ ವಿರೋಧ ಪಕ್ಷವಾಗಿದ್ದರೂ, ಒಂದು ಅಧ್ಯಕ್ಷ ಪದವಿ ಕೂಡಾ ಪಕ್ಷಕ್ಕೆ ಸಿಕ್ಕಿಲ್ಲ. ಅತಿದೊಡ್ಡ ವಿರೋಧ ಪಕ್ಷ ಎರಡು ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದು, ಇದು ನವ ಭಾರತದ ವಾಸ್ತವ" ಎಂದು ರಾಜ್ಯಸಭೆಯಲ್ಲಿ ಟಿಎಂಸಿ ಮುಖಂಡರಾಗಿರುವ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಸಮಾಜವಾದಿ ಪಕ್ಷದ ಮುಖಂಡ ರಾಮ್‍ ಗೋಪಾಲ್ ಯಾದವ್ ಕೂಡಾ ಕಳೆದಕೊಂಡಿದ್ದಾರೆ. ಆಹಾರ ಸಮಿತಿಯ ಅಧ್ಯಕ್ಷ ಸ್ಥಾನ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಪಾಲಾಗಿದ್ದರೆ, ಅವರ ಪಕ್ಷದ ಸಹೋದ್ಯೋಗಿ ವಿವೇಕ್ ಠಾಕೂರ್ ಆರೋಗ್ಯ ಸಮಿತಿಯ ಮುಖ್ಯಸ್ಥ ಹುದ್ದೆ ಪಡೆದಿದ್ದಾರೆ ಎಂದು timesofindia.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News