ಉತ್ತರಾಖಂಡ: ಕಮರಿಗೆ ಬಿದ್ದ ಬಸ್, 25 ಮಂದಿ ಮೃತ್ಯು

Update: 2022-10-05 05:21 GMT

ಡೆಹ್ರಾಡೂನ್: ಉತ್ತರಾಖಂಡ್‌ನ ಪೌರಿ ಗಡ್ವಾಲ್‌ನಲ್ಲಿ ಕಳೆದ ರಾತ್ರಿ ಮದುವೆ ಪಾರ್ಟಿಯ ಬಳಿಕ   40 ಕ್ಕೂ ಹೆಚ್ಚು ಜನರನ್ನು ಸಾಗಿಸುತ್ತಿದ್ದ ಬಸ್ ವೊಂದು  ಕಮರಿಗೆ ಬಿದ್ದ ಪರಿಣಾಮ 25 ಜನರು ಸಾವನ್ನಪ್ಪಿದ್ದಾರೆ. ಸಿಮ್ಡಿ ಗ್ರಾಮದ ಬಳಿ ಅಪಘಾತ ಸಂಭವಿಸಿದ ಸ್ಥಳದಲ್ಲಿ ರಾಜ್ಯ ವಿಪತ್ತು ಸ್ಪಂದನಾ ಪಡೆ ಹಾಗೂ  ಪೊಲೀಸರು ರಾತ್ರಿಯ ಕಾರ್ಯಾಚರಣೆಯ ನಂತರ ಒಟ್ಟು 21 ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

"ಧೂಮಕೋಟ್‌ನ ಬಿರೋಖಾಲ್ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದ ಪೌರಿ ಗರ್ವಾಲ್ ಬಸ್ ಅಪಘಾತದಲ್ಲಿ 25 ಜನರು ಸಾವನ್ನಪ್ಪಿದ್ದಾರೆ. ಪೊಲೀಸರು ಹಾಗೂ  ಎಸ್‌ಡಿಆರ್‌ಎಫ್ ರಾತ್ರೋರಾತ್ರಿ 21 ಜನರನ್ನು ರಕ್ಷಿಸಿದ್ದಾರೆ; ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ" ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ರಾಜ್ಯ ಪೊಲೀಸ್ ಮುಖ್ಯಸ್ಥರು ರಾತ್ರಿಯ ಕಾರ್ಯಾಚರಣೆಯ ದೃಶ್ಯಗಳನ್ನು ಟ್ವೀಟ್ ಮಾಡಿದ್ದಾರೆ, ಇದರಲ್ಲಿ ರಕ್ಷಣಾ ತಂಡಗಳು ಗಾಯಗೊಂಡ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವುದನ್ನು ಕಾಣಬಹುದು.

ಪ್ರಧಾನಿ ನರೇಂದ್ರ ಮೋದಿಯವರ ಕಚೇರಿ ಅಪಘಾತವನ್ನು "ಹೃದಯ ವಿದ್ರಾವಕ" ಎಂದು ಬಣ್ಣಿಸಿದೆ ಹಾಗೂ  ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವಾನ ಹೇಳಿದೆ.

 "ಉತ್ತರಾಖಂಡದ ಪೌರಿಯಲ್ಲಿ ಸಂಭವಿಸಿದ ಬಸ್ ಅಪಘಾತ ಹೃದಯ ವಿದ್ರಾವಕವಾಗಿದೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಸಂತ್ರಸ್ತ ಕುಟುಂಬಳಿಗೆ ಸಾಂತ್ವಾನ ಹೇಳುವೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು. " ಎಂದು ಪ್ರಧಾನಿ ಮೋದಿಯನ್ನು ಉಲ್ಲೇಖಿಸಿ ಪಿಎಂಒ ಟ್ವೀಟ್ ಮಾಡಿದೆ.

ಜಿಲ್ಲೆಯ ಲಾಲ್‌ಧಾಂಗ್‌ನಿಂದ ಮದುವೆ ಪಾರ್ಟಿ ಮುಗಿಸಿ ಜನರು ಹೊರಟಿದ್ದರು. ನಂತರ ಬಸ್ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ ತಮಗೆ ಬಂತು ಎಂದು ಹರಿದ್ವಾರ ಪೊಲೀಸ್ ಮುಖ್ಯಸ್ಥ ಸ್ವತಂತ್ರ ಕುಮಾರ್ ಸಿಂಗ್ ಅವರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News