ಅಮಿತ್ ಶಾ ಭೇಟಿ ವೇಳೆ ನನಗೆ ಗೃಹಬಂಧನ: ಮೆಹಬೂಬಾ ಮುಫ್ತಿ ಆರೋಪ; ಪೊಲೀಸರಿಂದ ನಿರಾಕರಣೆ

Update: 2022-10-05 15:09 GMT

ಶ್ರೀನಗರ,ಅ.5: ತನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಮತ್ತು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪತ್ತನ್ ಪಟ್ಟಣಕ್ಕೆ ತಾನು ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು ಬುಧವಾರ ಆರೋಪಿಸಿದ್ದಾರೆ. ಆದರೆ ಜಮ್ಮು-ಕಾಶ್ಮೀರ ಪೊಲೀಸರು ಇದನ್ನು ನಿರಾಕರಿಸಿದ್ದಾರೆ.

‌ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಪ್ರದೇಶದಲ್ಲಿ ಸಹಜತೆ ಮರಳಿದೆ ಎಂದು ಡಂಗುರ ಸಾರುತ್ತ ಕಾಶ್ಮೀರದಲ್ಲಿ ಸುತ್ತುತ್ತಿದ್ದರೆ ಪಕ್ಷದ ಕಾರ್ಯಕರ್ತನ ಮದುವೆಯಲ್ಲಿ ಭಾಗಿಯಾಗಲು ಪತ್ತನ್ಗೆ ಭೇಟಿ ನೀಡಲು ಬಯಸಿದ್ದ ತನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಓರ್ವ ಮಾಜಿ ಮುಖ್ಯಮಂತ್ರಿಯ ಹಕ್ಕುಗಳನ್ನು ಇಷ್ಟು ಸುಲಭವಾಗಿ ಕಿತ್ತುಕೊಳ್ಳಬಹುದಾದರೆ ಶ್ರೀಸಾಮಾನ್ಯನ ಪಾಡನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ ಎಂದು ಮುಫ್ತಿ ಹೇಳಿದ್ದಾರೆ.ಜಮ್ಮು-ಕಾಶ್ಮೀರಕ್ಕೆ ಮೂರು ದಿನಗಳ ಭೇಟಿ ನೀಡಿರುವ ಶಾ ಬುಧವಾರ ಸಂಜೆ ಬಾರಾಮುಲ್ಲಾ ಪಟ್ಟಣದಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದರು.

ಮುಫ್ತಿ ಪ್ರಯಾಣ ಕೈಗೊಳ್ಳಲು ಸ್ವತಂತ್ರರಾಗಿದ್ದಾರೆ ಮತ್ತು ಅವರ ಚಲನವಲನಗಳನ್ನು ನಿರ್ಬಂಧಿಸಲಾಗಿಲ್ಲ. ಅವರು ಟ್ವೀಟಿಸಿರುವ ಚಿತ್ರವು ಬಂಗಲೆಯ ನಿವಾಸಿಗಳು ಬೀಗ ಹಾಕಿರುವ ಪ್ರವೇಶದ್ವಾರದ ಒಳಬದಿಯಿಂದ ತೆಗೆದಿರುವುದಾಗಿದೆ ಎಂದು ಶ್ರೀನಗರ ಪೊಲೀಸರು ಹೇಳಿದ್ದಾರೆ.

ಪತ್ತನ್ಗೆ ಪ್ರಯಾಣಿಸಲು ತನಗೆ ಅವಕಾಶ ನೀಡುವುದಿಲ್ಲ ಎಂದು ಬಾರಾಮುಲ್ಲಾ ಎಸ್ಪಿ ತನಗೆ ಮಂಗಳವಾರ ತಿಳಿಸಿದ್ದರು. ಇಂದು ಜಮ್ಮು-ಕಾಶ್ಮೀರ ಪೊಲೀಸರು ತನ್ನ ನಿವಾಸದ ಪ್ರವೇಶದ್ವಾರಕ್ಕೆ ಒಳಗಿನಿಂದ ಬೀಗ ಜಡಿದಿದ್ದಾರೆ ಮತ್ತು ಈಗ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿರುವ ಮುಫ್ತಿ,ಕಾನೂನು ಜಾರಿ ಏಜೆನ್ಸಿಗಳು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ನಿರ್ಲಜ್ಜ ಪ್ರಯತ್ನಗಳನ್ನು ನಡೆಸುತ್ತಿರುವುದು ವಿಷಾದನೀಯವಾಗಿದೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು,ಮುಫ್ತಿಯವರಿಗೆ ಕೆಲವು ಮಾಮೂಲು ಸುರಕ್ಷತಾ ಮಾಹಿತಿಗಳನ್ನು ತಿಳಿಸಲಾಗಿತ್ತು ಮತ್ತು ಅವರು ಪ್ರಯಾಣ ಕೈಗೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ಪುನರುಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News