ಹೊಸ ರಾಷ್ಟ್ರೀಯ ಪಕ್ಷ 'ಭಾರತ ರಾಷ್ಟ್ರ ಸಮಿತಿʼಗೆ ಚಾಲನೆ ನೀಡಿದ ಕೆಸಿಆರ್
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಖ್ಯಸ್ಥ ಕೆ ಚಂದ್ರಶೇಖರ ರಾವ್(KCR) ಅವರು ಬುಧವಾರ ಮಧ್ಯಾಹ್ನ 1:19 ಕ್ಕೆ ಪಕ್ಷದ ಮುಖಂಡರು, ಸಚಿವರು, ಸಂಸದರು, ಶಾಸಕರು, ಎಂಎಲ್‌ಸಿಗಳು ಮತ್ತು ಜಿಲ್ಲಾ ಮಟ್ಟದ ಸಂಯೋಜಕರ ಸಮಾವೇಶದಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷವಾದ ಭಾರತ್ ರಾಷ್ಟ್ರ ಸಮಿತಿಯನ್ನು ಪ್ರಾರಂಭಿಸಿದರು. ಹೈದರಾಬಾದ್‌ನಲ್ಲಿರುವ ಪಕ್ಷದ ಪ್ರಧಾನ ಕಛೇರಿ ತೆಲಂಗಾಣ ಭವನದಲ್ಲಿ ಕಾರ್ಯಕ್ರಮ ನಡೆಯಿತು.
ಏಪ್ರಿಲ್ 2000 ರಲ್ಲಿ ಪ್ರಾರಂಭವಾದ ಟಿಆರ್‌ಎಸ್ ಅನ್ನು ರಾಷ್ಟ್ರೀಯ ಪಕ್ಷವನ್ನಾಗಿ ಬದಲಾಯಿಸಲಾಗಿದೆ. ಘೋಷಣೆಯಾದ ಕೂಡಲೇ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಜಮಾಯಿಸಿದ ಟಿಆರ್‌ಎಸ್ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದರು.
ಈ ಸಂದರ್ಭದಲ್ಲಿ, 280 ಕ್ಕೂ ಹೆಚ್ಚು ಪಕ್ಷದ ಕಾರ್ಯಕಾರಿ ಸದಸ್ಯರು, ಶಾಸಕರು ಮತ್ತು ಸಂಸದರು ಟಿಆರ್‌ಎಸ್ ಅನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನೊಂದಿಗೆ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿದರು. ಕೆಸಿಆರ್ ಶೀಘ್ರದಲ್ಲೇ ತಮ್ಮ ಭವಿಷ್ಯದ ಯೋಜನೆಗಳು ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅವರು ವಹಿಸಲು ಉದ್ದೇಶಿಸಿರುವ ಪಾತ್ರದ ಬಗ್ಗೆ ಮಾತನಾಡಲಿದ್ದಾರೆ.
ತಮ್ಮ ಪಕ್ಷದ 20 ಶಾಸಕರೊಂದಿಗೆ ಮಂಗಳವಾರ ರಾತ್ರಿ ಹೈದರಾಬಾದ್‌ಗೆ ಆಗಮಿಸಿದ ಜೆಡಿಎಸ್ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕೆಸಿಆರ್ ಪಕ್ಷವನ್ನು ಪ್ರಾರಂಭಿಸಿದಾಗ ತೆಲಂಗಾಣ ಭವನದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಲಿತ ನಾಯಕ ತಿರುಮಾವಲವನ್ ಸೇರಿದಂತೆ ತಮಿಳುನಾಡಿನ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಗೆ ಸೇರಿದ ಇಬ್ಬರು ಸಂಸದರು ಉಪಸ್ಥಿತರಿದ್ದರು. ಕೆಸಿಆರ್, ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಮತ್ತು ಇತರರು ಆಗಮಿಸಿದ ಕುಮಾರಸ್ವಾಮಿ, ತಿರುಮಾವಲವನ್ ಮತ್ತು ಇತರರನ್ನು ಆತ್ಮೀಯವಾಗಿ ಸ್ವಾಗತಿಸಿದರು.