ಉದ್ಯೋಗ ವಂಚನೆ ಜಾಲ: ಮ್ಯಾನ್ಮಾರ್ ನಿಂದ 45 ಭಾರತೀಯರನ್ನು ರಕ್ಷಿಸಿದ ಸರ್ಕಾರ

Update: 2022-10-05 13:53 GMT
Photo: Twitter/Arindam Bagchi

ಹೊಸದಿಲ್ಲಿ: ಮ್ಯಾನ್ಮಾರ್ ನಲ್ಲಿ ನಕಲಿ ಉದ್ಯೋಗ ಜಾಲಗಳಿಗೆ ಸಿಲುಕಿ ಒದ್ದಾಡುತಿದ್ದ 45 ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದಾರೆ.

ಇನ್ನೂ ಕೆಲವು ಭಾರತೀಯ ನಾಗರಿಕರನ್ನು ಅವರ ನಕಲಿ ಉದ್ಯೋಗದಾತರಿಂದ ರಕ್ಷಿಸಲಾಗಿದ್ದರೂ ಅವರು ದೇಶವನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆಂದು ಅಲ್ಲಿನ ಅಧಿಕಾರಿಗಳು ಅವರನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅವರನ್ನು ಶೀಘ್ರ ಭಾರತಕ್ಕೆ ವಾಪಸ್ ಕರೆತರಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಮಂದಿಯನ್ನು ವಂಚಿಸಿ ಅವರನ್ನು ಮ್ಯಾನ್ಮಾರ್‍ಗೆ ಕಳುಹಿಸಿದ ವಿವಿಧ ರಾಜ್ಯಗಳ ಏಜಂಟರ ಕುರಿತ ಮಾಹಿತಿಯನ್ನು ಆಯಾಯ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ ಹಾಗೂ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇಂತಹ ಉದ್ಯೋಗ ವಂಚನೆ ಜಾಲಗಳು ಲಾವೋಸ್ ಮತ್ತು ಕ್ಯಾಂಬೊಡಿಯಾದಿಂದಲೂ ವರದಿಯಾಗಿದ್ದವು. ವಿದೇಶಗಳಲ್ಲಿ ಉದ್ಯೋಗ ಆಫರ್ ಒಪ್ಪಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಬೇಕು ಹಾಗೂ ಸೂಕ್ತ ಪರಾಮರ್ಶೆ ನಡೆಸಬೇಕೆಂದು ಸರಕಾರ ಅಭ್ಯರ್ಥಿಗಳಿಗೆ ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News