ಮಂಗಳೂರು ದಸರಾ ಸಮಾರೋಪ

Update: 2022-10-06 05:39 GMT

ಮಂಗಳೂರು, ಅ.6: ನವರಾತ್ರಿ ಹಿನ್ನೆಲೆಯಲ್ಲಿ ಕಳೆದ ಒಂಭತ್ತು ದಿನಗಳಲ್ಲಿ ಮಂಗಳೂರು ದಸರಾ ಖ್ಯಾತಿಯ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪೂಜಿಸಲ್ಪಟ್ಟ ಶಾರದಾ ಮಾತೆಯ ವಿಗ್ರಹವನ್ನು ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಕ್ಷೇತ್ರದ ಪುಷ್ಕರಣಿಯಲ್ಲಿ ಜಲಸ್ತಂಭನಗೊಳಿಸುವ ಮೂಲಕ ಮಂಗಳೂರು ದಸರಾ ಸಮಾಪನಗೊಂಡಿತು.

 ಬುಧವಾರ ಸಂಜೆ ಮಹಾಪೂಜೆಯ ಬಳಿಕ ಕುದ್ರೋಳಿ ಕ್ಷೇತ್ರದಿಂದ ಹೊರಟ ಶಾರದಾ ಮಾತೆಯನ್ನೊಳಗೊಂಡ ಶೋಭಾ ಯಾತ್ರೆಯೂ ನಗರದ ರಾಜ ಬೀದಿಗಳಲ್ಲಿ ಸಾಗಿ ಇಂದು ಬೆಳಗ್ಗೆ ಮತ್ತೆ ಕ್ಷೇತ್ರಕ್ಕೆ ಹಿಂದಿರುಗಿತು. ಈ ಸಂದರ್ಭದಲ್ಲಿ ಗಣಪತಿ, ಆದಿಶಕ್ತಿ, ನವ ದುರ್ಗೆಯರನ್ನು ಕ್ರಮವಾಗಿ ಕ್ಷೇತ್ರದ ಪುಷ್ಕರಣಿಯಲ್ಲಿ ಜಲಸ್ತಂಭನಗೊಳಿಸಿದ ಬಳಿಕ ಪೂಜೆಯೊಂದಿಗೆ ಶಾರದಾ ಮಾತೆಯನ್ನು ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.

ಕೊರೋನ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಮಂಗಳೂರು ದಸರಾ ಪ್ರಯುಕ್ತ ನಡೆಯುವ ಶೋಭಾಯಾತ್ರೆ ಸ್ಥಗಿತಗೊಂಡಿತ್ತು. ಆದರೆ ಈ ವರ್ಷ ಮತ್ತೆ ಭವ್ಯ ಶೋಭಾಯಾತ್ರೆ ನಡೆದಿದೆ. ಬುಧವಾರ ಸಂಜೆಯಿಂದ ಗುರುವಾರ ಬೆಳಗ್ಗೆಯವರೆಗೆ ನಡೆದ ಶೋಭಾಯಾತ್ರೆಗೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ಹುಲಿ ವೇಷಧಾರಿಗಳನ್ನು ಒಳಗೊಂಡ ಹಲವಾರು ವೈವಿಧ್ಯಮಯ ಸ್ತಬ್ಧಚಿತ್ರಗಳು ಶೋಭಾ ಯಾತ್ರೆಯುದ್ದಕ್ಕೂ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News